Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳದಲ್ಲಿ ಸ್ಥಾಪನೆಗೊಂಡ ಸಪ್ತಸ್ವರ ಸಂಗೀತ, ನೃತ್ಯ, ಸಾಂಸ್ಕೃತಿಕ ಸಂಸ್ಥೆ ಕಳೆದ ಹಲವು ವರ್ಷಗಳಿಂದ ನಮ್ಮ ಭಾರತೀಯ ಸಂಸ್ಕೃತಿ-ಪರಂಪರೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ನಡೆಸಿದೆ. ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಪರಂಪರೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
Related Articles
Advertisement
ಚಕ್ಕಡಿಯಲ್ಲಿ ಆಗಮನ: ಮಹಿಳೆಯರಿಂದ, ಮಹಿಳೆಯರಿಗಾಗಿ ನಡೆಯುವ ಈ ಸುಗ್ಗಿ-ಹುಗ್ಗಿ ಗ್ರಾಮೀಣ ಸಂಸ್ಕೃತಿ ಉತ್ಸವದಲ್ಲಿ ಸಂಜೆ ವರೆಗೂ ಪುರುಷರಿಗೆ ಪ್ರವೇಶವಿಲ್ಲ. ಸಂಜೆ 5ರ ವೇಳೆಗೆ ಆಮಂತ್ರಿತ ಪುರುಷರು ಸುಗ್ಗಿ-ಹುಗ್ಗಿ ಉತ್ಸವ ನೋಡಬಹುದು. ಅಂದು ಮಹಿಳೆಯರೇ ಎತ್ತುಗಳಿಗೆ ಪೂಜೆ ಮಾಡಿ, ಅಲಂಕೃತ ಚಕ್ಕಡಿಗಳನ್ನು ಹೂಡಲಿದ್ದಾರೆ. ಇದೇ ವೇಳೆ ಕೆಲವರಿಗೆ ಆರತಿ ಮಾಡಿ, ವಸ್ತ್ರದಾನ (ಬಟ್ಟೆ), ಸಂಕ್ರಮಣದ ವಿಶೇಷ ಊಟವಾದ ಸಜ್ಜೊರೊಟ್ಟಿ, ಗುರೆಳ್ಳ ಚಟ್ನಿ, ಎಣ್ಣೆಗಾಯಿ ಪಲ್ಯ, ಮೊಸರು ಸಹಿತ ಬುತ್ತಿಯೊಂದಿಗೆ ಕುಂಭ, ಆರತಿಯೊಂದಿಗೆ ಚಕ್ಕಡಿಯನ್ನು ಹೊತ್ತ ಎತ್ತುಗಳ ಮೆರವಣಿಗೆ ನಡೆಸಲಾಗುವುದು. ಬಳಿಕ ಎಳ್ಳು-ಬೆಲ್ಲ ಹಂಚಿ ಸಂಕ್ರಮಣ ಆಚರಿಸಲಾಗುತ್ತದೆ. ಹುಡುಗರ ಕರಿ-ಎರೆಯುವುದು (ಮಕ್ಕಳಿಗೆ ಸಂಕ್ರಮಣದಂದು ವಿಶೇಷ ಸ್ನಾನ ಮಾಡಿಸುವುದು), ನಂತರ ಚಿಕ್ಕಸಂಗಮದ ನದಿಗೆ ನೂರಾರು ಸುಮಂಗಲೆಯರಿಂದ ಬಾಗಿನ ಅರ್ಪಿಸಲಾಗುವುದು ಎಂದು ವಿವರಿಸಿದರು.
ರಾಜಕೀಯ ರಹಿತ: ಸಪ್ತಸ್ವರ ಸಂಗೀತ, ನೃತ್ಯ, ಸಾಂಸ್ಕೃತಿಕ ಸಂಸ್ಥೆ, ಕಳೆದ 2011ರಿಂದ ಹಲವು ಕಾರ್ಯಕ್ರಮ ನಡೆಸಿದ್ದು, ಯಾವುದೇ ರೀತಿಯ ಶುಲ್ಕ, ದೇಣಿಗೆ ಪಡೆಯುವುದಿಲ್ಲ. ಸಂಸ್ಥೆಯ ಸದಸ್ಯರೇ ಸ್ವಂತ ವಂತಿಗೆ ಹಾಕಿ, ಇಂತಹ ಗ್ರಾಮೀಣ ಸೊಗಡಿನ ಕಾರ್ಯಕ್ರಮ ನಡೆಸುತ್ತಿದೆ. ಈ ಬಾರಿಯೂ ಯಾವುದೇ ಶುಲ್ಕ ಪಡೆಯಲ್ಲ. ನಮ್ಮ ಉತ್ತರ ಕರ್ನಾಟಕ ಸೊಗಡಿನ ಉಡುಗೆಯಲ್ಲಿ ಭಾಗವಹಿಸುವುದು ಕಡ್ಡಾಯ. ಇದು ರಾಜಕೀಯರಹಿತ ಕಾರ್ಯಕ್ರಮ. ಯಾವುದೇ ಪಕ್ಷ ಮತ್ತು ಜಾತಿಯವರಿಗೆ ಆದ್ಯತೆ ಕೊಡುವ, ಜಾತಿಕರಣ ಮಾಡುವ ಪ್ರಯತ್ನ ನಡೆಸಲು ಬಿಟ್ಟಿಲ್ಲ ಎಂದರು.
ಅಲ್ಲದೇ ಅಂದಿನ ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗದ ಕುರಿತು ತರಬೇತಿ-ಚರ್ಚೆ ಕೂಡ ನಡೆಯಲಿದೆ ಎಂದು ಜ್ಯೋತಿ ಪಾಟೀಲ ಹೇಳಿದರು.
ಸಪ್ತಸ್ವರ ಸಂಗೀತ, ನೃತ್ಯ, ಸಾಂಸ್ಕೃತಿಕ ಸಂಸ್ಥೆಯ ಪಾರ್ವತಿ ನಾಯಕ, ನಿರ್ಮಲಾ ಮಲಘಾಣ, ಸವಿತಾ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಸಾಮೂಹಿಕ ಭೋಜನಮಹಿಳೆಯರೇ ತಯಾರಿಸಿದ ಗಾಳಿಪಟ ಹಾರಿಸುವ ಉತ್ಸವವೂ ಈ ವೇಳೆ ನಡೆಯಲಿದೆ. ಬಣ್ಣ-ಬಣ್ಣದ ಗಾಳಿಪಟ ಉತ್ಸವ, ಸಪ್ತಸ್ವರ ಸದಸ್ಯರ ಜೊತೆಗೆ ಸಾಮೂಹಿಕ ಭೋಜನ ನಡೆಯಲಿದೆ. ಸುಗ್ಗಿ-ಹುಗ್ಗಿ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದಲ್ಲಿ ದೇಶೀಯ ಆಟ, ನೃತ್ಯ, ಜನಪದ ಆಟಗಳ ಪ್ರದರ್ಶನ, ಡೊಳ್ಳು ಕುಣಿತ, ಗೊಂಬೆ ಆಟಗಳು ನಡೆಯಲಿವೆ. ಮಹಿಳೆಯರಿಂದ ವೀರಗಾಸೆ ಕುಣಿತ, ಸಂಜೆ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
•ಜ್ಯೋತಿ ಪಾಟೀಲ,
ಮುಧೋಳದ ಸಪ್ತಸ್ವರ ಸಂಗೀತ,
ನೃತ್ಯ, ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ