Advertisement

ಗ್ರಾಮೀಣ ಕ್ರೀಡೆಗಳ ಉಳಿವಿಗೆ ಮುಂದಾಗಿ: ಬೆಳ್ಳಿ ಪ್ರಕಾಶ್‌

03:12 PM Nov 06, 2021 | Team Udayavani |

ಕಡೂರು: ಗ್ರಾಮೀಣ ಕ್ರೀಡೆಗಳ ಉಳಿವಿಗೆ ಯುವಕರು ಮುಂದಾಗಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುತ್ತಿರುವುದನ್ನು ಶಾಸಕ ಬೆಳ್ಳಿಪ್ರಕಾಶ್‌ ಶ್ಲಾಘಿಸಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಕ್ರೀಡೆಗಳು ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುತ್ತವೆ. ಸ್ಪರ್ಧೆಗಿಂತ ಹೆಚ್ಚಾಗಿ ಆತ್ಮ ಸಂತೋಷ, ಆತ್ಮವಿಶ್ವಾಸ ಹಾಗೂ ಪರಸ್ಪರ ಸ್ನೇಹ ಆತ್ಮೀಯತೆಯಿಂದ ಸಾಮಾಜಿಕ ಮೌಲ್ಯದ ಗುಣಗಳನ್ನು ಬೆಳೆಸುತ್ತವೆ ಎಂದರು.

ಯಾವುದೇ ಸಮಸ್ಯೆಗಳಿಲ್ಲದೆ ಸ್ಪರ್ದೆಗಳನ್ನು ನಡೆಸಬೇಕು ಎಂದು ಯುವಕರಿಗೆ ಕರೆ ನೀಡಿದರು.

ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಸದಸ್ಯ ಕೆ.ಎಂ. ಮೋಹನ್‌ ಕುಮಾರ್‌, ಎಪಿಎಂಸಿ ಅಧ್ಯಕ್ಷ ಚೌಳಹಿರಿಯೂರು ರವಿಕುಮಾರ್‌, ಜಿಪಂ ಮಾಜಿ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ಪುರಸಭಾ ಸದಸ್ಯರಾದ ಕೆ. ಯತಿರಾಜ್‌, ಗೋವಿಂದು, ವೀರಭದ್ರೇಶ್ವರ ಯುವಕ ಸಂಘದ ಅಧ್ಯಕ್ಷ ಮೋಹನ್‌, ಚೇತನ್‌ ಕೆಂಪರಾಜ್‌, ದೇವರಾಜ್‌, ರಘು, ಜಿಮ್‌ ರಾಜು, ಮಾರುತಿ, ಪಂಗ್ಲಿ ಮಂಜುನಾಥ್‌ ಮತ್ತಿತರರಿದ್ದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಸುತ್ತಮುತ್ತಲ ಜಿಲ್ಲೆಗಳಿಂದ ಸುಮಾರು 60ಕ್ಕೂ ಹೆಚ್ಚು ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲಿನ ಊರುಗಳಿಂದ ನೂರಾರು ಜನರು ಆಗಮಿಸಿದ್ದರು.

Advertisement

ಸ್ಪರ್ಧೆ ಆರಂಭವಾದ ನಂತರ ಎತ್ತಿನ ಗಾಡಿಯೊಂದು ವೇಗವಾಗಿ ಓಡುವ ಸಂದರ್ಭದಲ್ಲಿ ಬೆದರಿದ ಎತ್ತುಗಳು ತಮ್ಮ ಮಾರ್ಗ ಬದಲಿಸಿದ್ದು ಆ ವೇಳೆ ಅಲ್ಲಿ ವೀಕ್ಷಿಸುತ್ತಿದ್ದ ಪಟ್ಟಣದ ಯುವಕನೋರ್ವ ಗಾಡಿಗೆ ಸಿಲುಕಿದರೂ ಸಹ ಪವಾಡ ಸದೃಶ ರೀತಿಯಲ್ಲಿ ಬದುಕಿದ್ದಾನೆ. ಯುವಕನ ತಲೆಗೆ ತೀವ್ರ ಪೆಟ್ಟಾಗಿದ್ದು ತಕ್ಷಣ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎಂದು ಆಯೋಜಕರು ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next