ಇಂದು ಕ್ರೀಡೆಯಿಂದಲೇ ತಮ್ಮ ಬದುಕು ಕಟ್ಟಿಕೊಂಡವರನ್ನು, ಸಾಧನೆ ಮಾಡಿದವರನ್ನು ನಾವು ಕಾಣಬಹುದು. ಹಿಂದಿನ ಕಾಲದಲ್ಲಿ ಗ್ರಾಮೀಣ ಕ್ರೀಡೆಗಳ ಮೂಲಕವೇ ಅದೆಷ್ಟೋ ಮಂದಿ ಹೆಸರುವಾಸಿಯಾಗಿದ್ದರು. ಆದರೆ ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಗ್ರಾಮೀಣ ಆಟ ಕ್ರೀಡೆಗಳ ಕುರಿತು ಯಾರಿಗೂ ಆಸಕ್ತಿ ಇಲ್ಲದಂತಾಗಿದೆ.
ಹಿಂದೆ ನಾವುಗಳು ಆಡುತ್ತಿದ್ದ ಕಣ್ಣಮುಚ್ಚಾಲೆ, ಖೋ-ಖೋ, ಕುಂಟೆಬಿಲ್ಲೆ, ಮರಕೋತಿ ಆಟಗಳ ಕುರಿತು ಈಗಿನ ಮಕ್ಕಳಿಗೆ ತಿಳಿದಿಲ್ಲ. ಒಟ್ಟಾರೆಯಾಗಿ ಸದ್ಯ ಅತಿಯಾದ ಮೊಬೈಲ್, ಅಂತರ್ಜಾಲ ಪ್ರಭಾವದಿಂದ ಗ್ರಾಮೀಣ ಆಟೋಟಗಳು ತನ್ನ ಮೌಲ್ಯ ಕಳೆದುಕೊಂಡು ಮರೆಯಾಗುತ್ತಿರುವುದಂತು ಸತ್ಯ.
ಆಗಿನ ಕಾಲದಲ್ಲಿ ಬೇಸಗೆ ರಜೆ ಬಂದರೆ ಸಾಕು ಎಲ್ಲ ಮಕ್ಕಳು ಒಟ್ಟುಗೂಡಿ ಗ್ರಾಮೀಣ ಆಟಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು. ಆ ದಿನಗಳೇ ಎಷ್ಟು ಚಂದ. ನೆನಪಿಸಿಕೊಂಡಾಗ ಮೈ ರೋಮಾಂಚನವಾಗುತ್ತದೆ. ಈಗ ಅದು ಕೇವಲ ನೆನಪಾಗಷ್ಟೇ ಉಳಿದಿದೆ. ಈಗಿನ ಮಕ್ಕಳಿಗೆ ರಜೆ ಸಿಕ್ಕ ಕೂಡಲೆ ಮೊಬೈಲ್ ಬೇಕು ಅಷ್ಟೆ. ಮೊಬೈಲ್‌ನಲ್ಲಿ ಇರುವ ಆನ್‌ಲೈನ್ ಗೇಮ್ಸ್‌ಗಲಾಷ್ಟೇ ಅವರಿಗೆ ತಿಳಿದಿರುವುದು.
ನಾವು ಆಟ ಆಡುತ್ತಿದ್ದ ಆಟಗಳ ಪರಿಚಯವೂ ಅವರಿಗಿಲ್ಲ. ಸ್ನೇಹಿತರೊಂದಿಗೆ ಸೇರಿ ಆಟ ಆಡುವಾಗ ಸಿಗುವ ಖುಷಿಯೂ ಅವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ಕ್ರಿಕೆಟ್ ಆಡಲು ಜನರು ಸಿಗುತ್ತಿದ್ದರು ಆದರೆ ಚೆಂಡು ಖರೀದಿಸಲು ಸಾಧ್ಯವಿಲ್ಲದೆ ಎಲ್ಲ ಸ್ನೇಹಿತರು ಸೇರಿ ಹಣ ಹಾಕಿ ಚೆಂಡು ಖರೀದಿಸುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಚೆಂಡು ಖರೀದಿಸುವ ಸಾಮರ್ಥ್ಯವಿದ್ದರೂ ಆಟ ಆಡಲು ಜನರ ಕೊರತೆಯಿದೆ. ಎಲ್ಲ ಮೊಬೈಲ್ ಹಿಡಿದುಕೊಂಡು ಅವರವರ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.
ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗ್ರಾಮೀಣ ಕ್ರೀಡೆಗಳನ್ನು ಮಕ್ಕಳಿಗೆ ಗೂಗಲ್‌ನಲ್ಲಿ ತೋರಿಸುವಂತಹ ಪರಿಸ್ಥಿತಿ ಬರಬಹುದು. ಈಗಿನ ಮಕ್ಕಳಿಗೆ ಆನ್‌ಲೈನ್ ಗೇಮ್ಸ್‌ಗಳದ್ದಷ್ಟೇ ಪರಿಚಯ. ಕಣ್ಣಾಮುಚ್ಚಾಲೆ, ಕುಂಟೆಬಿಲ್ಲೆ, ಮರಕೋತಿ ಆಟಗಳನ್ನು ಆಡುವುದರಿಂದ ಅದೇನೋ ಮನಸ್ಸಿಗೆ ಮುದ ಸಿಗುತ್ತಿತ್ತು. ಇದರೊಂದಿಗೆ ನಾವು ಹೆಚ್ಚಿನ ಜ್ಞಾನ ಮತ್ತು ಪ್ರಪಂಚದ ಬಗ್ಗೆ ಅರಿತುಕೊಳ್ಳಬಹುದಿತ್ತು.
ಮೊಬೈಲ್ ಗೀಳು ಒಂದೇ ಆದರೆ ಜೀವನದಲ್ಲಿ ಒಬ್ಬಂಟಿ ಎಂದು ಅನಿಸುತ್ತದೆ. ಮೊಬೈನ್‌ನಲ್ಲಿ ಚಾರ್ಜ್ ಇರುವವರೆಗೆ ನಾವು ಮೊಬೈಲ್ ಬಳಸುತ್ತೇವೆ. ಮತ್ತೆ ಮೊಬೈಲ್ ಇಟ್ಟಾಗ ನಾವು ಯಾರೊಂದಿಗಾದರೂ ಬೇರೆಯಬೇಕು ಎಂದು ಅನಿಸುತ್ತದೆ. ಅದಕ್ಕಾಗಿ ಇಂತಹ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಅವುಗಳನ್ನು ಮರೆಯಾಗದಂತೆ ನೋಡಿಕೊಳ್ಳೋಣ.
-ಚೈತನ್ಯ
ಎಂ.ಪಿ.ಎಂ. ಕಾಲೇಜು ಕಾರ್ಕಳ