ಯಾದಗಿರಿ: ಕಮಲೇಶ ಚಂದ್ರ ವರದಿ ಶಿಫಾರಸುಗಳನ್ನು ಸಂಪೂರ್ಣ ಜಾರಿಗೊಳಿಸಿ ಗ್ರಾಮೀಣ ಅಂಚೆ ಸೇವಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಸ್ಟೇಷನ್ ಅಂಚೆ ಕಚೇರಿ ಎದುರು ಅನಿರ್ದಿಷ್ಟ ಧರಣಿ 2ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ನಾಗಪ್ಪ ಉಳ್ಳೆಸುಗೂರು ಮಾತನಾಡಿ, ಸಮಿತಿ ಶಿಫಾರಸಿನ ಪ್ರಕಾರ ಕಳೆದ 2016ರಿಂದಲೇ ಜಾರಿಗೊಳಿಸಿ ನ್ಯಾಯಯುತವಾಗಿ ಅಂಚೆ ಸೇವಕರಿಗೆ ಕೊಡಬೇಕಾದ ಸೌಲತ್ತು
ಒದಗಿಸಿಕೊಡಬೇಕಿತ್ತು. ಆದರೆ, ಇದುವರೆಗೆ ಸೌಲತ್ತು ಒದಗಿಸಿಕೊಡಲು ಮೀನಾ ಮೇಷ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ 12 ವರ್ಷಗಳಿಗೊಮ್ಮೆ ಎರಡೆರಡು ವಿಶೇಷ ವೇತನ ಬಡ್ತಿ ನೀಡಬೇಕು. ಗ್ರಾಚುಟಿ 5 ಲಕ್ಷ ರೂ. ನೀಡಬೇಕು, ಕರ್ತವ್ಯ ನಿರತ ಸೇವಕ ಮರಣ ಹೊಂದಿದರೆ ಅಂತವರ ಕುಟುಂಬಗಳಿಗೆ ಕೇವಲ 50,000/- ರೂ. ನೀಡಲಾಗುತ್ತಿದ್ದು, ಇದರ ಬದಲಿಗೆ 5 ಲಕ್ಷ ರೂ. ನೀಡಬೇಕು. ವರ್ಗಾವಣೆ ನೀತಿ ಬದಲಾವಣೆ ಮಾಡಬೇಕು. ಮೂಲವೇತನಕ್ಕೆ ಶೇ. 10ರಷ್ಟು ಎಸ್.ಡಿ.ಬಿ.ಎಸ್. ಸೌಲಭ್ಯ ನೀಡಬೇಕು. ಇಬ್ಬರು ಮಕ್ಕಳಿಗೆ ತಲಾ 6 ಸಾವಿರ ರೂ. ಹಾಗೂ ಮಕ್ಕಳ ಶಿಕ್ಷಣ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ದೊಡ್ಡಯ್ಯ ನಾಯಕ ಅಳಿಗೇರಿ, ಖಜಾಂಚಿ ಹಣಮಂತ್ರಾಯ ರಾಮಸಮುದ್ರ, ಸಹ ಕಾರ್ಯದರ್ಶಿ ಗುರುಸ್ವಾಮಿ ಅಮಲಿಹಾಳ, ಸಹ ಖಜಾಂಚಿ ಲಾಲ್ ಅಹಮ್ಮದ್ ಬಿ.ಪಿ.ಎಂ. ಕೌಳೂರು, ಬಸಮ್ಮ ಅಲ್ಲಿಪುರ, ಮಗ್ಗೆಮ್ಮ ಅಬ್ಬೆತುಮಕೂರು, ಚೆನ್ನಯ್ಯ ಸ್ವಾಮಿ ತುಮಕೂರು, ರಾಯಪ್ಪ ಉಳ್ಳೆಸುಗೂರು, ಮಹೇಶ ಮುಂಡರಗಿ ಸೇರಿದಂತೆ ಅನೇಕ ಅಂಚೆ ಸೇವಕರು ಪಾಲ್ಗೊಂಡಿದ್ದರು.