ರಾಮನಗರ: ಗ್ರಾಮೀಣ ಭಾಗದ ಜನತೆಗೆ ಇಂದಿಗೂ ಸುಸಜ್ಜಿತವಾದ ಆರೋಗ್ಯ ಸೇವೆ ಲಭಿಸದೆ, ಗಂಭೀರವಾದ ಖಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೂಟಗಲ್ ಹೋಬಳಿ ಅಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಜಿಎಸ್ ಗ್ಲೋಬಲ್ ವೈದ್ಯಕೀಯ ಮಹಾದ್ಯಾಲಯ ಮತ್ತು ಆಸ್ಪತ್ರೆ, ರಾಮನಗರ ತಾಪಂ ಹಾಗೂ ಅಕ್ಕೂರು ಗ್ರಾಪಂನಿಂದ ನಡೆದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದ ಅವರು ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರಿಂದ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಉತ್ತಮ ದೇಹಾರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ನಿರಂತರ ಜಾಗೃತಿ ಅವಶ್ಯಕತೆ ಇದೆ. ಗ್ರಾಮೀಣ ಜನತೆ ಸಹ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಬೇಕಾಗಿರುವ ಮಾಹಿತಿಯನ್ನು ಹತ್ತಿರದ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ: ತಾವು ತಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಎಲ್ಲಾ 19 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯಗಳನ್ನು ಮತ್ತು ಜನರಿಗೆ ದೊರೆಯುತ್ತಿರುವ ವೈದ್ಯಕೀಯ ಸೇವೆಗಳ ಬಗ್ಗೆ ಗಮನಹರಿಸುತ್ತಿರುವುದಾಗಿ ತಿಳಿಸಿದರು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೇವೆ ಪಡೆಯಬೇಕು. ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ವಿರಳ: ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡಿ.ಎಂ.ಮಹದೇವಯ್ಯ ಮಾತನಾಡಿ, ತಾಲೂಕಿನ ಗಡಿಭಾಗದಲ್ಲಿರುವ ಅಕ್ಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದನ್ನು ಶ್ಲಾಘಿಸಿದರು. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಬರುವುದು ವಿರಳ. ಹೀಗಾಗಿ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು. ತಜ್ಞ ವೈದ್ಯರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಿ ಎಂದರು.
ಶಿಬಿರದ ಉಪಯೋಗವನ್ನು 270ಕ್ಕೂ ಹೆಚ್ಚು ಮಂದಿ ಪಡೆದುಕೊಂಡರು. ಕಣ್ಣು, ಕೀಲು ಮತ್ತು ಮೂಳೆ, ಸಾಮಾನ್ಯ ಚಿಕಿತ್ಸೆ, ಇಸಿಜಿ, ಸ್ತ್ರೀರೋಗ, ಚರ್ಮಕಾಯಿಲೆ ಸೇರಿದಂತೆ ವಿವಿಧ ತಜ್ಞ ವೈದ್ಯರು ಶಿಬಿರವನ್ನು ನಡೆಸಿಕೊಟ್ಟರು. ಅಗತ್ಯವಿದ್ದವರಿಗೆ ಉಚಿತವಾಗಿ ಔಷದಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಶಶಿಕಲಾ, ಬಿ.ಜಿ.ಎಸ್.ಗ್ಲೋಬಲ್ ವೈದ್ಯಕೀಯ ಮಹಾದ್ಯಾಲಯ ಮತ್ತು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವೇಣುಗೋಪಾಲ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಶ್ರೀ, ಉಪಾಧ್ಯಕ್ಷ ಎ.ಸಿ.ಚಂದ್ರಯ್ಯ, ಸದಸ್ಯರಾದ ನಾಗರಾಜು, ನಿಂಗಯ್ಯ, ಮಂಜುಳಾ, ಸುಧಾ, ಶಿವಣ್ಣ, ಪಿಡಿಒ ಜಗದಾಂಭ, ಅಕ್ಕೂರು ವೈದ್ಯಾಧಿಕಾರಿ ಡಾ.ರಾಜೇಂದ್ರ ಭಾಗವಹಿಸಿದ್ದರು.