ಬೀದರ: ಸಾವಿನ ರಣಕೇಕೆ ಹಾಕುತ್ತ ಭೀತಿ ಹೆಚ್ಚಿಸುತ್ತಿರುವ ಕೋವಿಡ್ 19 ಹಾವಳಿಯಿಂದ ಹೊರಬರಲು ಬೀದರನಲ್ಲಿ ವಿನೂತನ ಆಚರಣೆ ಶುರುವಾಗಿದೆ. ಕೋವಿಡ್ 19 ಮಾದರಿಯ ಧತ್ತುರಿ (ಮುಳ್ಳಿನ ಕಾಯಿ) ಹಣ್ಣಿನ ತೋರಣ ಕಟ್ಟಿದರೆ ಸೋಂಕು ಮನೆ ಅಂಗಳಕ್ಕೆ ವಕ್ಕರಿಸುವುದಿಲ್ಲ ಎಂಬ ನಂಬಿಕೆ ಹೆಚ್ಚಿದೆ.
ಕೋವಿಡ್ 19 ದಾಳಿಯಿಂದ ದೇಶ ತತ್ತರಿಸಿದ್ದು, ವೈರಸ್‌ನ ಕಬಂಧ ಬಾಹು ಈಗಾಗಲೇ ಬೀದರ ಜಿಲ್ಲೆಗೂ ಚಾಚಿಕೊಂಡಿದೆ. ಲಾಕ್‌ಡೌನ್ ಬಳಿಕ ಕೋವಿಡ್ 19 ಸೋಂಕಿತರ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ, ಗುರುವಾರ ಒಂದೇ ದಿನ 10 ಪಾಸಿಟಿವ್ ವರದಿ ಆಗಿರುವುದರಿಂದ ಜಿಲ್ಲೆ ಮತ್ತಷ್ಟು ಆತಂಕಕ್ಕೆ ಜಾರಿದೆ. ವೈರಸ್‌ನ ಭೀತಿಯಿಂದ ಜನ ಈಗ ಧತ್ತುರಿ ಕಾಯಿಯ ಮೊರೆ ಹೋಗಿದ್ದಾರೆ. ಮುಳ್ಳಿನ ಕಾಯಿಯನ್ನು ತೋರಣ ಮಾಡಿ ಕಟ್ಟಿದರೆ ಕೋವಿಡ್ 19 ವೈರಸ್ ಬರೋದಿಲ್ಲ ಅನ್ನೋ “ಮೌಡ್ಯ’ದ ಮಾತು ಈಗ ಹಳ್ಳಿಯಿಂದ ಹಳ್ಳಿಗೆ ವ್ಯಾಪಿಸಿದೆ.
ರಸ್ತೆ ಬದಿಯ ಬೇಲಿಗಳಲ್ಲಿ ಬೆಳೆಯುವ ಧತ್ತುರಿ ಹಣ್ಣನ್ನು ಶಿವರಾತ್ರಿ ಮತ್ತು ಗಣೇಶ ಉತ್ಸವ ಸಮಯದಲ್ಲಿ ಪೂಜೆಗಾಗಿ ಬಳಸಲಾಗುತ್ತದೆ. ಹಣ್ಣು ಮುಳ್ಳಿನ ಕಾಯಿಯಂತಿದ್ದು, ಕೊರೊನಾ ಸೋಂಕಿನ ಚಿತ್ರವನ್ನೇ ಹೋಲುವುದರಿಂದ ಅದನ್ನು ತೋರಣವಾಗಿ ಕಟ್ಟಿದರೆ ತಮ್ಮ ಮನೆಗೆ ಕೋವಿಡ್ 19 ದಿಂದ ತೊಂದರೆಯಾಗುವುದಿಲ್ಲ ಎಂದು ನಂಬಿದ್ದಾರೆ. ಹಾಗಾಗಿ ಈ ಕಾಯಿಯನ್ನು ಹೂವು, ಮಾವು ಮತ್ತು ಬೇವಿನ ಸೊಪ್ಪು ಜತೆಗೆ ಮನೆ ಬಾಗಿಲಿಗೆ ಕಟ್ಟಿ ಕುಂಕುಮ ಮತ್ತು ಅರಶಿಣದಿಂದ ಪೂಜೆ ಮಾಡುತ್ತಿದ್ದಾರೆ.
ಹೊಸ ಆಚರಣೆ ಶುರುವಾಗುತ್ತಿದ್ದಂತೆ ಜನ ಮರುಳ್ಳೋ ಜಾತ್ರೆ ಮರುಳ್ಳೋ ಎಂಬಂತೆ ಬೇಲಿ ಮುಳ್ಳಿನ ಕಾಯಿಗೆ ಈಗ ಡಿಮ್ಯಾಂಡ್ ಹೆಚ್ಚಿದೆ. ಕಾಯಿಗಾಗಿ ಜನ ಬೇಲಿ ಬೇಲಿ ಹುಡುಕಾಡುತ್ತಿದ್ದಾರೆ. ನಗರದ ಹೊರವಲಯದ ಲಾಡಗೇರಿ ಗ್ರಾಮದ ಸುತ್ತಮುತ್ತ ಎಲ್ಲರ ಮನೆ ಬಾಗಿಲಲ್ಲಿ ಧತ್ತುರಿ ಕಾಯಿಯ ತೋರಣ ಕಾಣಸಿಗುತ್ತಿದೆ. ಈ ಆಚರಣೆ ಈಗ ಬಹುತೇಕ ಹಳ್ಳಿಗಳಿಗೂ ಹಬ್ಬಿದೆ. ಇನ್ನು ಶುಕ್ರವಾರ ಔರಾದ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕುಂಕುಮ, ಬೇವಿನ ಸೊಪ್ಪು, ಹೂವಿನಿಂದ ಬಾಗಿಲಿಗೆ ಪೂಜೆ ಮಾಡಿದ್ದಾರೆ. ಇದರಿಂದ ಕೊರೊನಾ ಸೋಂಕು ಮನೆಗೆ ಪ್ರವೇಶಿಸುವುದಿಲ್ಲ ಎಂಬುದು ಗ್ರಾಮೀಣ ಜನರ ನಂಬಿಕೆಯಾಗಿದೆ.
ಕೋವಿಡ್ 19 ಮಾದರಿಯ ಧತ್ತುರಿ (ಮುಳ್ಳಿನ ಕಾಯಿ) ಹಣ್ಣನ್ನು ಮನೆ ಬಾಗಿಲಿಗೆ ತೋರಣ ಕಟ್ಟಿ ಪೂಜೆ ಮಾಡುವುದರಿಂದ ಸೋಂಕಿನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬ ನಂಬಿಕೆ ಗ್ರಾಮದ ಜನರಲ್ಲಿ ಹುಟ್ಟಿಕೊಂಡಿದೆ. ಹಾಗಾಗಿ ಇಲ್ಲಿಯ ಪ್ರತಿ ಮನೆಗಳಿಗೆ ಕಾಯಿಯ ತೋರಣ ಕಟ್ಟಿ, ಮಹಿಳೆಯರು ಪೂಜೆ ಮಾಡಿದ್ದಾರೆ. –
ಸುನೀಲ ಭಾವಿಕಟ್ಟಿ, ಲಾಡಗೇರಿ ನಿವಾಸಿ.
-ಶಶಿಕಾಂತ ಬಂಬುಳಗೆ