Advertisement
ನಮ್ಮ ಅಸ್ತಿತ್ವ ಇರುವುದೇ ಹಳ್ಳಿಗಳಲ್ಲಿ ಅಂತ ಸಾರಿದ “ಬಂಗಾರದ ಮನುಷ್ಯ’ ಸಿನಿಮಾ ಯುವಜನತೆಯ ಮೇಲೆ ಬೀರಿದ ಪ್ರಭಾವ ಅಪಾರ. ಅಂದರೆ, ರೂರಲ್‌ಡೆವಲಪ್‌ಮೆಂಟ್ ಬಗ್ಗೆ ಪರಿಣಾಮಕಾರಿಯಾಗಿ ತಿಳಿ ಹೇಳಿದ್ದೇ ಈ ಚಿತ್ರ. ಓದು ಮುಗಿಸಿ ನಗರಕ್ಕೆ ಗುಳೇ ಹೋಗಿದ್ದ ಅನೇಕ ಕೃಷಿ ಪದವೀಧರರು ಈ ಸಿನಿಮಾದಿಂದ ಪ್ರಭಾವಿತರಾಗಿ ಹಳ್ಳಿಗೆ ಮರಳಿ ಕೃಷಿಮಾಡಿ ಗೆದ್ದದ್ದು ಈಗ ಇತಿಹಾಸ. ಹಾಗೆ ಗೆದ್ದ ಒಬ್ಬರು ತಮ್ಮ ಫಾರ್ಮ್ಹೌಸ್‌ಗೆ “ಬಂಗಾರದ ಮನುಷ್ಯ ಎಸ್ಟೇಟ್’ ಎಂದೇ ಹೆಸರಿಟ್ಟರು. ಸರ್ಕಾರಗಳೂ, ಸಹ ತಮ್ಮ ಕ್ರಿಯಾಯೋಜನೆಗಳನ್ನು ರೂಪಿಸುವಾಗ ಸಿನಿಮಾದ ಪ್ರಭಾವಕ್ಕೊಳಗಾಗಿದ್ದನ್ನು ಹಲವು ಕೃಷಿತಜ್ಞರು ಈಗಲೂ ಹೇಳುತ್ತಾರೆ. ಕೃಷಿಯಿಂದ ಶೇ.17ರಷ್ಟು ಜಿಡಿಪಿ ಪಡೆಯುವ ಸರ್ಕಾರಗಳು ಗ್ರಾಮೀಣಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತವೆ. ಶಿಕ್ಷಣ, ಆರೋಗ್ಯ, ಸಾಕ್ಷರತೆ, ಉದ್ಯೋಗ, ವ್ಯವಸಾಯ, ನೀರು ಸರಬರಾಜು, ರಸ್ತೆ, ಸಂಪರ್ಕ ವ್ಯವಸ್ಥೆ, ಗ್ರಾಮ ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ಮಾರ್ಟ್ ವಿಲೇಜ್, ರೈತೋತ್ಪನ್ನ ಮಾರುಕಟ್ಟೆ, ಸಾವಯವ ಕೃಷಿ, ನೀರಾವರಿ ಕಾಲುವೆ ನಿರ್ವಹಣೆ ಹೀಗೆ, ಹತ್ತು ಹಲವು ಕ್ಷೇತ್ರಗಳನ್ನೊಳಗೊಂಡ ಗ್ರಾಮೀಣ ಚಿತ್ರಣ ಈಗಾಗಲೇ ಬದಲಾಗುತ್ತಿರುವುದರಿಂದ, ರೂರಲ್‌ಡೆವಲಪ್‌ಮೆಂಟ್ ಕೋರ್ಸ್‌ಗೆ ಬೆಲೆ ಹೆಚ್ಚುತ್ತಿದೆ. ಹೀಗಾಗಿ, ಸಂಬಂಧಿಸಿದ ಕ್ಷೇತ್ರಗಳಲ್ಲಿ ನುರಿತವರ ಅವಶ್ಯಕತೆ ಅಗತ್ಯವಾಗಿದೆ. ಅವರನ್ನು ತಯಾರು ಮಾಡಲೆಂದೇ ಅನೇಕ ವಿವಿಗಳು, ಕಾಲೇಜುಗಳು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಹಲವು ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ.
ಗಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಡಿಪ್ಲೊಮೊದಿಂದ ಹಿಡಿದು ಪಿಎಚ್. ಡಿವರೆಗೆ ಅಧ್ಯಯನ ಮಾಡಬಹುದು. ಮುಖ್ಯವಾಗಿ ನಾಲ್ಕು ಹಂತದ ಕೋರ್ಸ್‌ಗಳನ್ನು ನಮ್ಮ ವಿವಿಗಳಲ್ಲಿ ಬೋಧಿಸಲಾಗುತ್ತಿದೆ. ಎರಡು ವರ್ಷದ ಡಿಪ್ಲೊಮೊ, ಮೂರು ವರ್ಷದ ಪದವಿ ಅಧ್ಯಯನ, ಎರಡು ವರ್ಷದ ಸ್ನಾತಕೋತ್ತರ ಪದವಿ ಹಾಗೂ ಮೂರರಿಂದ – ನಾಲ್ಕು ವರ್ಷಗಳ ಪಿಎಚ್.ಡಿವರೆಗೆ ಅಧ್ಯಯನ ಕೈಗೊಳ್ಳಬಹುದಾಗಿದೆ. ಕೋರ್ಸ್‌ಗಳ ಪಠ್ಯಕ್ರಮದಲ್ಲಿ ಗ್ರಾಮೀಣ ಯೋಜನೆ ಮತ್ತು ಅಭಿವೃದ್ಧಿ, ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಅಭಿವೃದ್ಧಿ, ಗ್ರಾಮೀಣ ಮಾರುಕಟ್ಟೆ ನಿರ್ವಹಣೆ, ಸಮುದಾಯ ಸವಲತ್ತು ಮತ್ತು ಸೇವೆ, ಸಾಮಾಜಿಕ ಭದ್ರತೆ, ಯೋಜನೆ ಮತ್ತು ಅನುಷ್ಠಾನ, ಗ್ರಾಮೀಣ ಶಿಕ್ಷಣ, ವಿದ್ಯುದೀಕರಣ, ಸಾಕ್ಷರತೆ, ನೈರ್ಮಲ್ಯದ ಕುರಿತು ಅನೇಕ ಮಹತ್ವ ಪೂರ್ಣ ವಿಷಯಗಳನ್ನು ಬೋಧಿಸಲಾಗುತ್ತದೆ. ಕಲಿಯುವ ವಿದ್ಯಾರ್ಥಿಗಳು ಭಾರತದ ನಿಜವಾದ ಅಂತಃಸತ್ವ ಇರುವ ಹಳ್ಳಿಗಳ ಪ್ರತಿಯೊಂದೂ ವಿಭಾಗದ ಬಗ್ಗೆ ತಿಳಿದುಕೊಳ್ಳುತ್ತಾರೆ. ಎಲ್ಲೆಲ್ಲಿ ಕೋರ್ಸ್?
ಭಾರತದ ಪ್ರತಿಷ್ಠಿತ ಐಐಎಂಗಳಿಂದ ಹಿಡಿದು ರಾಜ್ಯ ಸರ್ಕಾರ ವಿವಿಗಳು ನಡೆಸುವ ಅನೇಕ ಕಾಲೇಜುಗಳಲ್ಲಿ ಗ್ರಾಮೀಣಾಭಿವೃದ್ಧಿ ಕೋರ್ಸ್‌ಗಳಿವೆ. ಅವುಗಳಲ್ಲಿ ಮುಖ್ಯವಾದವು ಇಲ್ಲಿವೆ. ಕರ್ನಾಟಕ ಮುಕ್ತ ವಿವಿ ಮಾನಸ ಗಂಗೋತ್ರಿ ಮೈಸೂರು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಇಂದಿರಾಗಾಂಧಿ ಮುಕ್ತ ವಿವಿಗಳಂತೆ ಹಲವು ವಿವಿಗಳಲ್ಲಿ ಕೋರ್ಸ್‌ಗಳಿವೆ.
Related Articles
ದ್ವಿತೀಯ ಪಿಯುಸಿಯಲ್ಲಿ ಶೇ.50ರಷ್ಟು ಅಂಕಗಳಿಸಿದವರು ಡಿಪ್ಲೊಮೊ ಅಥವಾ ಪದವಿ ಅಧ್ಯಯನಕ್ಕೆ ಸೇರಬಹುದು. ನಂತರ ಶೇ.50ರಷ್ಟು ಅಂಕಗಳಿಸಿದವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು. ಆದರೆ, ಯಾವುದೇ ಕೋರ್ಸ್‌ಸೇರಲು ಪ್ರವೇಶ ಪರೀಕ್ಷೆಗಳನ್ನೆದುರಿಸಬೇಕಾಗುತ್ತದೆ. ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದವರು ವಿವಿಗಳಲ್ಲೇ ಅಧ್ಯಯನ ಮುಂದುವರೆಸಬಹುದು. ಕೆಲವು ಪರೀಕ್ಷೆಗಳು ಆನ್‌ಲೈನ್‌ನಲ್ಲೂ ನಡೆಯುತ್ತವೆ. ಸ್ನಾತಕೋತ್ತರ ಪದವಿ ಅಧ್ಯಯನ ಸೇರ ಬಯಸುವವರು CAT, MAT, XAT, IRMA, NMIMS, SNAP ನಂಥ ಪರೀಕ್ಷೆಗಳನ್ನು ಉತ್ತೀರ್ಣರಾಗಬೇಕು.
Advertisement
ಯಾವ ಯಾವ ಕೆಲಸ?ಅಧ್ಯಯನ ಮುಗಿಸಿದ ನಂತರ ರೂರಲ್ ಡೆವಲಪ್‌ಮೆಂಟ್ ಆಫೀಸರ್, ವೆಂಡರ್ ಡೆವಲಪ್‌ಮೆಂಟ್ ಮ್ಯಾನೇಜರ್, ಸೇಲ್ಸ್ ಆಫೀಸರ್, ನ್ಯಾಷನಲ್ ಸೇಲ್ಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ರೀಸರ್ಚ್ ಹೆಡ್, ರೂರಲ್ ಮ್ಯಾನೇಜರ್, ಸೀನಿಯರ್ ಪೋ›ಗ್ರಾಂ ಆಫೀಸರ್, ಏರಿಯಾ ಎಕ್ಸಿಕ್ಯೂಟಿವ್ ಮುಂತಾದ ಹುದ್ದೆಗಳಿಗೆ ಪ್ರಯತ್ನಿಸಬಹುದು. ಐಟಿಸಿ ಬ್ಯುಸಿನೆಸ್, ಗೋದ್ರೇಜ್ ಅಗ್ರೋವೆಟ್ ಲಿ, ಮ್ಯಾಪೊ› ಫುಡ್ಸ್, ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್, ಬಿಹಾರ್ ರೂರಲ್ ಲೈವಿಹುಡ್ಸ್ ಪೊ›ಮೋಷನ್ ಸೊಸೈಟಿ, ವೇದಾಂತ ಸಿಎಸ್‌ಆರ್‌ನಂಥ ಕಂಪೆನಿಗಳಲ್ಲಿಯೂ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಇದಲ್ಲದೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸರ್ಕಾರ ಹಮ್ಮಿಕೊಳ್ಳುವ ಸಮಾಜ ಕಲ್ಯಾಣ ಯೋಜನೆಗಳಲ್ಲೂ ಸಾಕಷ್ಟು ಕೆಲಸಗಳಿವೆ. ಗುರುರಾಜ್ ಎಸ್. ದಾವಣಗೆರೆ