Advertisement

ಗ್ರಾಮೀಣ ಗ್ರಂಥಾಲಯ ಪಂಚಾಯ್ತಿಗೆ

01:32 PM Sep 23, 2019 | Suhan S |

ಶಿರಸಿ: ಗ್ರಾಮೀಣ ಜನರಲ್ಲಿ ಓದುವ ಹವ್ಯಾಸ ಬೆಳೆಸಬೇಕು, ವರ್ತಮಾನದ ತಿಳಿವಳಿಕೆ ವೃದ್ಧಿಸಬೇಕು ಎಂದು ಗ್ರಾಪಂ ಮಟ್ಟದಲ್ಲಿ ತೆರೆಯಲಾಗಿದ್ದ ಗ್ರಾಪಂ ವಾಚನಾಲಯಗಳು ಇನ್ನು ಗ್ರಂಥಾಲಯ ಇಲಾಖೆ ನಿರ್ವಹಣೆ ಮಾಡುವುದಿಲ್ಲ. ಬದಲಿಗೆ ಇದರ ಸಂಪೂರ್ಣ ಉಸ್ತುವಾರಿ ಆಯಾ ಪಂಚಾಯಿತಿಗಳೇ ವಹಿಸಿಕೊಳ್ಳಲಿವೆ.

Advertisement

ಗ್ರಾಮೀಣ ಭಾಗದಲ್ಲಿ ಪುಸ್ತಕಗಳ ಓದು, ಜ್ಞಾನಾರ್ಜನೆ ಅನುಕೂಲತೆಗೆ ಸ್ಥಾಪನೆಯಾಗಿದ್ದ ಗ್ರಾಪಂ ಗ್ರಂಥಾಲಯಗಳ ಸಮರ್ಪಕ ನಿರ್ವಹಣೆ ದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಜ್ಞಾನ ದೇಗುಲವನ್ನು ಗ್ರಾಪಂಗಳು ನಿರ್ವಹಿಸುವ ಜವಾಬ್ದಾರಿ ನೊಗ ಹೊರಬೇಕಿದೆ.

ಈ ಬಗ್ಗೆ ಸರಕಾರಿ ಆದೇಶವಾಗಿದ್ದು, ಗ್ರಂಥಾಲಯಗಳನ್ನು ಹಸ್ತಾಂತರ ಮಾಡಿಕೊಳ್ಳುವಂತೆ ಗ್ರಾಪಂಗಳಿಗೆ ಗ್ರಂಥಾಲಯ ಇಲಾಖೆಯಿಂದ ಕಳೆದ ಕೆಲ ದಿನಗಳ ಹಿಂದೆ ಪತ್ರ ಕಳುಹಿಸಲಾಗಿದೆ. ಇದೀಗ ಹಸ್ತಾಂತರದ ಆರಂಭಿಕ ಪ್ರಕ್ರಿಯೆ ಕೆಲ ಗ್ರಾಪಂಗಳಲ್ಲಿ ಆರಂಭವಾಗಿದೆ. ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಈಗಾಗಲೇ ಅರ್ಜಿ ಮಾದರಿ ಕಳುಹಿಸಲಾಗಿದ್ದು, ಅದರಲ್ಲಿ ಗ್ರಂಥಾಲಯದಲ್ಲಿರುವ ಪುಸ್ತಕಗಳು, ಸಾಮಗ್ರಿಗಳು ಸೇರಿದಂತೆ ವಿವರಣೆ ತುಂಬಿ ಗ್ರಾಪಂಗೆ ನೀಡಬೇಕಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಗ್ರಾಪಂಗೆ ಗ್ರಂಥಾಲಯಗಳು ವರ್ಗಾಯಿಸುವುದರಿಂದ ಕೆಲ ತಾಂತ್ರಿಕ ತೊಂದರೆಗಳು ಎದುರಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಗ್ರಂಥಾಲಯಗಳ ಮೇಲ್ವಿಚಾರಕರು ಈವರೆಗೆ ಗ್ರಂಥಾಲಯ ಇಲಾಖೆಯಿಂದ ಆನ್‌ಲೈನ್‌ ಮೂಲಕ ವೇತನ ಪಾವತಿಸಲಾಗುತ್ತಿತ್ತು. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಆನ್‌ಲೈನ್‌ನಲ್ಲಿ ವೇತನ ಪಾವತಿ ಇಲ್ಲದಿದ್ದರಿಂದ ಮೇಲ್ವಿಚಾರಕರು ವೇತನ ಗ್ರಾಪಂಗಳಲ್ಲೇ ಪಡೆಯುವ ಸಂದರ್ಭ ಎದುರಾಗುವ ಸಾಧ್ಯತೆಯಿದೆ.

ಕಳೆದ ನಾಲ್ಕು ವರ್ಷಗಳಿಂದ ಹಳ್ಳಿಗಳ ಗ್ರಂಥಾಲಯಗಳನ್ನು ಇಡೀ ದಿನದಲ್ಲಿ ನಾಲ್ಕು ತಾಸು ಮಾತ್ರ ತೆರೆದಿಡಲಾಗುತ್ತಿತ್ತು. ಆ ಸಮಯ ಇಲ್ಲಿಯೂ ಮುಂದುವರೆಯುತ್ತದೋ ಎಂಬ ಸ್ಪಷ್ಟತೆ ಇನ್ನೂ ಬಂದಿಲ್ಲ. ಇನ್ನು ಮೇಲ್ವಿಚಾರಕರಾಗಿ ದಶಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸುರುವವರು ಹಲವರಿದ್ದು, ಅವರಿಗೆಲ್ಲ ಬೇರೆ ಇಲಾಖೆಗೆ ಗ್ರಂಥಾಲಯ ಹಸ್ತಾಂತರವಾದ ನಂತರ ತಮ್ಮ ಮೊದಲ ಸರ್ವಿಸ್‌ ಪರಿಗಣನೆಯಾಗುತ್ತದೋ ಇಲ್ಲವೋ? ಮುಂದೆ ಕನಿಷ್ಠ ವೇತನ, ಕಾಯಂಮಾತಿಗೆಲ್ಲ ಹೊಡೆತ ಬೀಳುತ್ತದೋ ಎಂಬ ಆತಂಕವುಂಟಾಗಿದೆ. ಗ್ರಂಥಾಲಯ ಇಲಾಖೆ ಜಿಲ್ಲಾ ಹಂತದ ಅಧಿ ಕಾರಿಗಳು ಜಿಲ್ಲೆಯ ಎಲ್ಲ ಗ್ರಂಥಾಲಯಗಳ ಜವಾಬ್ದಾರಿ ನಿರ್ವಹಿಸಬೇಕಿತ್ತು. ಪ್ರತಿ ಸಂದರ್ಭದ ಆಗುಹೋಗುಗಳಿಗೆ ಸ್ಪಂದಿಸುವುದು ಕಷ್ಟವಿತ್ತು. ಈಗ ಕೊಂಚ ಹೊರೆ ಇಳಿದಂತಾಗಿದೆ. ಈಗ ಗ್ರಾಪಂಗಳ ಸುಪರ್ದಿಗೆ ಬರುವುದರಿಂದ ಸಹಜವಾಗಿ ಸ್ಥಳೀಯ ಆಡಳಿತ ಕಾಳಜಿ ತೋರಲು ಅವಕಾಶವಿದೆ. ಇನ್ನು ಗ್ರಾಪಂಗಳಲ್ಲಿ ವಸೂಲಿ ಮಾಡುತ್ತಿದ್ದ ಗ್ರಂಥಾಲಯ ಕರವನ್ನು ಈವರೆಗೆ ಗ್ರಂಥಾಲಯ ಇಲಾಖೆ ನೀಡಲಾಗುತ್ತಿತ್ತು.  ಅದೀಗ ಗ್ರಾಪಂ ಬಳಕೆಗೆ ಉಳಿಯುವ ಸಾಧ್ಯತೆಗಳಿದೆ. ಇದರಿಂದ ಗ್ರಂಥಾಲಯಗಳಿಗೆ ಪತ್ರಿಕೆ ಮುಂತಾದವುಗಳನ್ನು ಒದಗಿಸಲು ಅನುಕೂಲ ಆಗಬಹುದು.

Advertisement

218 ಗ್ರಾಪಂ ಗ್ರಂಥಾಲಯ:  ಜಿಲ್ಲೆಯಲ್ಲಿ ಒಟ್ಟು 218 ಗ್ರಾಪಂ ಗ್ರಂಥಾಲಯಗಳಿವೆ. 210ಕ್ಕೂ ಹೆಚ್ಚು ಮೇಲ್ವಿಚಾರಕರು ಕಾರ್ಯ ಮಾಡುತ್ತಿದ್ದಾರೆ. ಬಹುತೇಕ ಗ್ರಂಥಾಲಯಗಳು ಗ್ರಾಪಂ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಶಿರಸಿ ತಾಲೂಕಿನ ಉಂಚಳ್ಳಿ ಹಾಗೂ ಸಿದ್ದಾಪುರ ತಾಲೂಕಿನ ಹೆರೂರು ಗ್ರಾಪಂ ಗ್ರಂಥಾಲಯ ಮಾತ್ರ ಗ್ರಂಥಾಲಯ ಇಲಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

 

  • ರಾಘವೇಂದ್ರ ಬೆಟ್ಟಕೊಪ್ಪ
Advertisement

Udayavani is now on Telegram. Click here to join our channel and stay updated with the latest news.

Next