ಕುಷ್ಟಗಿ: ಒಮಿಕ್ರಾನ್ ವೈರಸ್ ನಿಯಂತ್ರಿಸಲು ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಮಟ್ಟದ ಟಾಸ್ಕ್ ಪೋರ್ಸ್ ರಚಿಸಿ ನಿಗಾವಹಿಸಲಾಗುವುದು ಎಂದು ತಹಶೀಲ್ದಾರ ಎಂ.ಸಿದ್ದೇಶ ಹೇಳಿದರು.
ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ಈ ಟಾಸ್ಕ್ ಪೋರ್ಸ್ ಗೆ ಅಧ್ಯಕ್ಷರಾಗಿದ್ದು, ಪಿಡಿಓ ಸದಸ್ಯ ಕಾರ್ಯದರ್ಶಿ ಉಳಿದ ಸದಸ್ಯರು, ಕರವಸೂಲಿಗಾರರು ಸದಸ್ಯರಾಗಿರುತ್ತಾರೆ ಈ ಟಾಸ್ಕಪೋರ್ಸ ಮೂಲಕ ಬೇರೆಡೆಯಿಂದ ಗ್ರಾಮಕ್ಕೆ ಬರುವ ವಲಸೆ ಕಾರ್ಮಿಕರನ್ನು ವಿಚಾರಿಸಿ, ಲಕ್ಷಣ ಕಂಡು ಬಂದರೆ ಕೋವಿಡ್ ಟೆಸ್ಟ್ ಮಾಡಿಸಿ 7 ದಿನಗಳವರೆಗೆ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕಿದೆ. ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಖಚಿತ ಪಡಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇದ್ದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತಿದೆ. ಅಲ್ಲದೇ ಗ್ರಾಮದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಕುಷ್ಟಗಿ ತಾಲೂಕಿನ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ಈ ಹೆದ್ದಾರಿಯಲ್ಲಿ ಸಂಚರಿಸುವ ಅನ್ಯ ರಾಜ್ಯದವರು ಹೆದ್ದಾರಿ ಡಾಬಾಗಳಿಗೆ ಬಂದಾಗ ಕೋವಿಡ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಂಬಂಧಿಸಿದ ಆರೋಗ್ಯ ತಂಡಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಬಿಜಕಲ್, ಕುಷ್ಟಗಿಯಲ್ಲಿ ಎರಡು ಕೋವಿಡ್ ಪ್ರಕರಣಗಳು ದೃಢವಾಗಿವೆ. ಇವರ ಪ್ರಾಥಮಿಕ ಸಂಪಕರ್ಿತರ ಬಗ್ಗೆ ನಿಗಾವಹಿಸಲಾಗಿದೆ. ಕೋವಿಡ್ ಪ್ರಕರಣಗಳನ್ನು ಉಲ್ಬಣಿಸಿದಲ್ಲಿ ಬಾಲಕರ ಮೆಟ್ರಿಕ್ ಪೂರ್ವ ಎಸ್ಸಿಎಸ್ಟಿ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕ್ವಾರಂಟೈನ್ ವಾಚ್ ಆ್ಯಪ್, ಕಾಂಟೆಕ್ಟ್ ಟ್ರೇಸಿಂಗ್ ಆ್ಯಪ್ನ್ನು ನಿರ್ವಹಿಸಲಾಗುತ್ತಿದೆ. ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದ್ದು ಜನರು ಸಹ ಸಹಕರಿಸಬೇಕಿದ್ದು, ಯಾವೂದೇ ಜಾತ್ರೆ ಉತ್ಸವ ರದ್ದುಗೊಳಿಸಲಾಗಿದೆ. ಮುಷ್ಕರ ಪ್ರತಿಭಟನೆ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಜನ ಸೇರದಂತೆ ಸಾಮಾಜಿಕ ಅಂತರ, ಮಾಸ್ಕ್ ಮೊದಲಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅನಗತ್ಯವಾಗಿ ಸಂಚರಿಸದೇ ಸಹಕರಿಸಬೇಕಿದೆ ಎಂದರು.