Advertisement

ಗ್ರಾಮೀಣ ತುರ್ತು ಕುಡಿವ ನೀರಿಗೆ ಸೂಚನೆ

04:22 PM May 21, 2017 | Team Udayavani |

ಧಾರವಾಡ: ಬರ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಎರಡು ತಿಂಗಳ ಹಿಂದಷ್ಟೇ ಅಧ್ಯಕ್ಷರ ವಿವೇಚನಾ ಕೋಟಾದಡಿ ಇರುವ 50 ಲಕ್ಷ ರೂ. ಹಣವನ್ನುಬಳಕೆ ಮಾಡಿಕೊಂಡಿದ್ದ ಧಾರವಾಡ ಜಿ.ಪಂ. ಇದೀಗ ಮತ್ತೆ 50 ಲಕ್ಷ ರೂ.ಗಳ ಅನುದಾನದ ಕ್ರಿಯಾ ಯೋಜನೆಗೆ ಶನಿವಾರ ಅನುಮೋದನೆ ನೀಡಿತು. 

Advertisement

ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಚೈತ್ರಾ ಶಿರೂರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ವಿಶೇಷ ಸಾಮಾನ್ಯ ಸಭೆ ಜರುಗಿತು. 2016-17 ನೇ ಸಾಲಿನ ಬರಪೀಡಿತ ತಾಲೂಕುಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಬರನಿರ್ವಹಣಾ ಟಾಸ್ಕ್ಫೋರ್ಸ್‌ ಯೋಜನೆಯಡಿ ಬಿಡುಗಡೆಯಾದ 200 ಲಕ್ಷ ರೂ.ಗಳಲ್ಲಿ 79 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಕಳೆದ ನವೆಂಬರ್‌ 22ರಂದು ಬಿಡುಗಡೆಯಾದ 240 ಲಕ್ಷ ರೂ.ಗಳಲ್ಲಿ 78 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಫೆ. 22ರಂದು ಬಿಡುಗಡೆಯಾದ 160 ಲಕ್ಷ ರೂ.ಗಳಲ್ಲಿ 86 ಕಾಮಗಾರಿಗಳನ್ನು ಕೈಗೊಂಡು 53 ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.

ಈ ಹಿಂದೆ ಬಿಡುಗಡೆಯಾದ ಜಿಪಂ ಅಧ್ಯಕ್ಷರ ವಿವೇಚನಾ ನಿಧಿಯಡಿ 30 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್‌ ಎಂ.ಎನ್‌.ಮುನವಳ್ಳಿ ಸಭೆಗೆ ಮಾಹಿತಿ ನೀಡಿದರು. 

ಜಿ.ಪಂ.ಅಧ್ಯಕ್ಷರ ವಿವೇಚನಾ ನಿಧಿಯಡಿ ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಸಭೆಯಲ್ಲಿ ಘಟನೋತ್ತರ ಅನುಮೋದನೆ ಪಡೆಯಲಾಯಿತು. ಹಾಗೂ ಕಳೆದ ಎಪ್ರೀಲ್‌ 7ರಂದು ಬಿಡುಗಡೆಯಾಗಿರುವ ಜಿ.ಪಂ. ಅಧ್ಯಕ್ಷರ ವಿವೇಚನಾ  ನಿಧಿಯ 50 ಲಕ್ಷ ರೂ.ಗಳ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. 

Advertisement

ಪ್ರವಾಸ ಮಾಡಿ ಪಟ್ಟಿಕೊಡಿ: ಎಲ್ಲ ಜಿ.ಪಂ. ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ತೀವ್ರ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಗ್ರಾಮಗಳು, ಜನವಸತಿ ಪ್ರದೇಶಗಳನ್ನು ಗುರುತಿಸಿ 2-3 ದಿನಗಳಲ್ಲಿ ವಿವರ ಒದಗಿಸಿದರೆ ಅಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವುದು.

ಜಿಲ್ಲೆಯಲ್ಲಿ ವಿಫಲವಾಗಿರುವ ಯಾವುದೇ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. ಧಾರವಾಡ ತಾಲೂಕು ಸೋಮಾಪುರ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಗೆ ತ್ವರಿತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸದಸ್ಯರು ಸಭೆಯ ಮೂಲಕ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.  

ಚೆಕ್‌ಡ್ಯಾಂಗೆ ಅನುಮೋದನೆ: ಜಿಲ್ಲಾದ್ಯಂತ ಚೆಕ್‌ ಡ್ಯಾಮ್‌ಗಳ ನಿರ್ಮಾಣಕ್ಕೆ ಬಹಳ ಬೇಡಿಕೆ ಇದೆ. ಸದಸ್ಯರು ಸಲ್ಲಿಸಿದ ಪ್ರಸ್ತಾವನೆಗಳಿಗೆ ಅನುಸಾರವಾಗಿ ಚೆಕ್‌ಡ್ಯಾಮ್‌ಗಳ ನಿರ್ಮಾಣ ವೈಜ್ಞಾನಿಕವಾಗಿದೆಯೇ ಎಂಬುದನ್ನು ತಜ್ಞರಿಂದ  ತ್ವರಿತವಾಗಿ ವರದಿ ಪಡೆದು ಜಿಪಿಎಸ್‌ ಮೂಲಕ ಸ್ಥಳ ದಾಖಲಿಸಿ, ಅನುಮೋದನೆ ನೀಡಲಾಗುತ್ತಿದೆ.

ಈ ದಿನವೇ 9 ಚೆಕ್‌ಡ್ಯಾಮ್‌ ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವುದು ಉಳಿದ ಕಾರ್ಯಗಳಿಗೆ ಇನ್ನೊಂದು ವಾರದಲ್ಲಿ ಅನುಮೋದನೆ ನೀಡಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್‌ ಆರ್‌. ಹೇಳಿದರು. ಜಿ.ಪಂ. ಉಪಾದ್ಯಕ್ಷ ಶಿವಾನಂದ ಕರಿಗಾರ ಸಭೆಯಲ್ಲಿ ಉಪಸ್ಥಿತರಿದ್ದರು.

ಜಿ.ಪಂ. ಉಪಕಾರ್ಯದರ್ಶಿ ವೈ.ಡಿ. ಕುನ್ನಿಭಾವಿ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಭೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next