ಹುಣಸೂರು: ಹುಣಸೂರಿನಲ್ಲಿ ನಡೆದ ಗ್ರಾಮೀಣ ದಸರಾ ಮೆರವಣಿಗೆಯು ಸ್ತಬ್ಧಚಿತ್ರಗಳು, ಕಲಾತಂಡಗಳ ಸಾಂಸ್ಕೃತಿಕ ಕಲರವಗಳ ನಡುವೆ ವಿಜೃಂಭಿಸಿತು. ಕೋವಿಡ್‌ನಿಂದಾಗಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಗ್ರಾಮೀಣ ದಸರಾಕ್ಕೆ ನಗರದ ರಂಗನಾಥ ಬಡಾವಣೆಯಲ್ಲಿ ಆರಂಭಗೊಂಡ ಮೆರವಣಿಗೆಗೆ ಶಾಸಕ ಎಚ್.ಪಿ.ಮಂಜುನಾಥ್, ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ, ತಹಶೀಲ್ದಾರ್ ಡಾ.ಅಶೋಕ್, ಇಒ ಮನು ಬಿ.ಕೆ. ಪೂಜೆಸಲ್ಲಿಸಿ, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಕಲಾತಂಡಗಳ ವೈಭವ ಪ್ರದರ್ಶನ: ಮೆರವಣಿಗೆಯಲ್ಲಿ ಮಂಗಳವಾದ್ಯ, ನಂದಿಕಂಬ, ನಗಾರಿತಂಡ, ಪೂಜಾಕುಣಿತ, ಡೊಳ್ಳುಕುಣಿತ, ವೀರಗಾಸೆ, ಕಟ್ಟೆಮಳಲವಾಡಿ ಡಾ.ಬಿ.ಆರ್.ಅಂಬೇಡ್ಕರ್ ಕಲಾತಂಡದ ಕೋಲಾಟ, ಸಿಡಿಯಮ್ಮ ತಾಯಿ ಮಹಿಳಾ ಜಾನಪದತಂಡ, ಗಾರುಡಿಗೊಂಬೆ, ಗೊಂಬೆಕುಣಿತ, ಯಕ್ಷಗಾನಕುಣಿತ, ಸೇರಿದಂತೆ ಕಲಾತಂಡಗಳ ಸಂಸ್ಕೃತಿಯ ವೈಭವ ಪ್ರದರ್ಶನ ಮೆರವಣಿಗೆಗೆ ಕಳೆಕಟ್ಟಿತ್ತು.
ಆಕರ್ಷಕ ಸ್ತಬ್ಧ ಚಿತ್ರಗಳು: ವಿವಿಧ ಗ್ರಾಮಪಂಚಾಯ್ತಿಗಳು ನಿರ್ಮಿಸಿದ್ದ ಜಲಜೀವನ್ ಮಿಷನ್, ಸ್ವಚ್ಛ ಭಾರತ್, ಸರಕಾರದ ಯೋಜನೆಗಳನ್ನು ಸಾದರಪಡಿಸಿದವು. ಆದಿವಾಸಿ ನಾಯಕ ಬಿರ್ಸಾಮುಂಡರ ಸ್ತಬ್ಧಚಿತ್ರ ಹಾಗೂ ಆದಿವಾಸಿಗಳ ಸಂಸ್ಕೃತಿ ಅನಾವರಣ ಹಾಗೂ ಭಾರತದ ರಾಷ್ಟ್ರಪತಿಯವರ ದ್ರೌಪತಿಮರ್ಮು ಭಾವಚಿತ್ರವನ್ನೊಳಗೊಂಡ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ತಾಲೂಕಿನ ಸಂಜೀವಿನಿ ಯೋಜನೆಯ ವಿವಿಧ ಮಹಿಳಾ ಸಂಘಗಳ ಮಹಿಳೆಯರು ಕಳಶಹೊತ್ತು ಮೆರವಣಿಗೆಯುದ್ದಕ್ಕೂ ಸಾಗಿಬಂದು ಕಳೆಕಟ್ಟಿದರು. ಇನ್ನು ಬೆಳ್ಳಿಯ ಅಲಂಕೃತ ಸಾರೋಟಿನಲ್ಲಿ ಚಾಮುಂಡೇಶ್ವರಿದೇವಿಯ ರಥ ಸಾಗಿಬಂತು. ಮೆರವಣಿಗೆಯು ಪ್ರಮುಖ ರಸ್ತೆಗಳ ಸಾಗಿ ಬಂದು ನಗರಸಭೆ ಮೈದಾನದಲ್ಲಿ ಸಮಾವೇಶಗೊಂಡಿತು.
ಬಹುಮಾನ ವಿತರಣೆ: ನಗರಸಭಾ ಮೈದಾನದಲ್ಲಿ ನಡೆದ ಸಮಾರಂಭವನ್ನು ಶಾಸಕ ಮಂಜುನಾಥ್, ರೈತ ದಸರಾಸಮಿತಿ ಉಪಾಧ್ಯಕ್ಷ ರಮೇಶ್ ಕುಮಾರ್, ಗ್ರಾಮೀಣ ದಸರಾ ಉಪಸಮಿತಿಯ ಉಪಾಧ್ಯಕ್ಷ ಸ್ವಾಮಿಗೌಡ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ, ಸದಸ್ಯೆ ಪ್ರಿಯಾಂಕ ಥಾಮಸ್, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ತಹಸೀಲ್ದಾರ್ ಡಾ.ಅಶೋಕ್, ಇಓ.ಮನುಬಿ.ಕೆ, ಉಪತಹಸೀಲ್ದಾರ್ ಶಕಿಲಾಬಾನು, ಶೋಭಾ ಗ್ರಾಮೀಣ ದಸರಾ ಕ್ರೀಡಾಕೂಟದ ವಿಜೇತರಿಗೆ ಶಾಸಕ ಮಂಜುನಾಥ್ ವೈಯಕ್ತಿಕವಾಗಿ ಕೊಡಮಾಡಿದ ಬಹುಮಾನ ವಿತರಿಸಿದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳು ನೀಡಿದ ಆಕರ್ಷಕ ನೃತ್ಯ ವೈಭವವನ್ನು ನೂರಾರು ಮಂದಿ ಕಣ್ತುಂಬಿಕೊಂಡರು.
ಸಮಾಜಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು, ತೋಟಗಾರಿಕೆಅಧಿಕಾರಿ ನೇತ್ರಾವತಿ, ಸಿಡಿಪಿಓ.ರಶ್ಮಿ, ಸಂಜೀವಿನಿ ಯೋಜನೆಯ ಮಂಜುಳನರಗುಂದ, ಆರ್.ಐ.ಗಳಾದ ನಂದೀಶ್, ಪ್ರಶಾಂತರಾಜೇಅರಸ್, ಆಚರಣಾ ಸಮಿತಿಯ ಜಯರಾಂ, ರಾಚಪ್ಪ, ಸುಬ್ಬರಾವ್, ಭಾಸ್ಕರ್, ತಾಲೂಕು ಅಕ್ರಮಸಕ್ರಮಸಮಿತಿ ಸದಸ್ಯೆ ವೆಂಕಟಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸ್ತಬ್ಧಚಿತ್ರಕ್ಕೆ ಲಕ್ಷ ರೂ. ಬಹುಮಾನ
ಈ ಬಾರಿ ಮೆರವಣಿಗೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದು, ನಾಡಿನ ಜನರ ಅಸ್ಮಿತೆಯ ಕನ್ನಡ ರಾಜ್ಯೋತ್ಸವವನ್ನು ಹಿಂದಿನ ಗತವೈಭವ ಮರಳುವ ರೀತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಚುರಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿ. ಈ ಬಾರಿ ಸರಕಾರಿ ಇಲಾಖೆ, ಶಾಲೆಗಳು ಹಾಗೂ ಸಂಘಸಂಸ್ಥೆಗಳ ಆಕರ್ಷಕ ಹಾಗೂ ಅತ್ಯುತ್ತಮ ದ್ವಿತೀಯ 50 ಸಾವಿರ ಹಾಗೂ ತೃತೀಯ 25 ಸಾವಿರ ರೂ. ನಗದು ಬಹುಮಾನ ವೈಯಕ್ತಿಕವಾಗಿ ನೀಡುವುದಾಗಿ ಎಂದು ಶಾಸಕ ಎಚ್ .ಪಿ.ಮಂಜುನಾಥ್ ಪ್ರಕಟಿಸಿದರು. ಗಾರ್ಮೆಂಟ್ಸ್ ಆರಂಭ: ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಮಂದಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಮೀಪದ ಕಟ್ಟೆಮಳಲವಾಡಿ ಬಳಿ ಗಾರ್ಮೆಂಟ್ಸ್ ತೆರೆಯಲು ಉದ್ದೇಶಿಸಲಾಗಿದೆ ಎಂದು ಶಾಸಕರು ತಿಳಿಸಿದರು.