ರಾಣಿಬೆನ್ನೂರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದು, ಇಲಾಖೆ ಅಧಿಕಾರಿಗಳ ಮೂಲಕ ಮಾಹಿತಿ ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಲೀಲಾವತಿ ಹೇಳಿದರು.
ಶನಿವಾರ ತಾಲೂಕಿನ ಹೊಸ ಚಂದಾಪುರ ಗ್ರಾಮದಲ್ಲಿ ಜಿಪಂ, ತಾಪಂ, ಗ್ರಾಪಂ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಶೇಷ ರೋಜಗಾರ ದಿನಾಚರಣೆ ಐಇಸಿ ಸಪ್ತಾಹ ಮತ್ತು ಜಲಶಕ್ತಿ ಅಭಿಯಾನ ಹಾಗೂ ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ಶ್ರಮದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮಗಳಿಗೆ ವರದಾನವಾಗಿವೆ. ಒಂದು ಕುಟುಂಬಕ್ಕೆ 100ದಿನಗಳ ಉದ್ಯೋಗ ನೀಡುವುದು. ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸುವ ಹಾಗೂ ನೈಸರ್ಗಿಕ ಸಂಪನ್ಮೂಲ ಬಲಪಡಿಸುವ ಹಿತ ದೃಷ್ಟಿಯಿಂದ ಮತ್ತು ವಲಸೆ ಹೋಗುವುದನ್ನು ತಡೆಗಟ್ಟಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದರು.
ಈ ಯೋಜನೆಯಲ್ಲಿ ಹೆಣ್ಣು ಮತ್ತು ಗಂಡು ಸಮಾನ ಕೂಲಿ ಪಡೆಯಬಹುದು. ಈ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲದವರು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಉದ್ಯೋಗ ಚೀಟಿಯನ್ನು ಮಾಡಿಸಿಕೊಳ್ಳಬಹುದು. ಕೇವಲ ಇದೊಂದೇ ಯೋಜನೆಯಲ್ಲ ಇನ್ನೂ ಹಲವಾರು ಯೋಜನೆಗಳು ನಿಮಗಾಗಿ ಕಾದಿವೆ. ಅವುಗಳ ಉಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಸಸಿಗಳನ್ನು ನೆಡುವುದರ ಮೂಲಕ ನೀರು ವಿನಾಕಾರಣ ದುರ್ಬಳಕೆ ಮಾಡದೆ ಮಿತವ್ಯಯದಿಂದ ಬಳಸುವ ಪ್ರವೃತ್ತಿ ಎಲ್ಲರಲ್ಲೂ ಬರಬೇಕು. ಹೆಚ್ಚೆಚ್ಚು ಗಿಡಮರಳನ್ನು ಬೆಳೆಸಿದರೆ ಅವುಗಳನ್ನು ಸಂರಕ್ಷಿಸಿದರೆ ಆಯಾ ಕಾಲಾವಧಿಗೆ ಮಳೆಯೂ ಚೆನ್ನಾಗಿ ಬರಲು ಸಾಧ್ಯವಾಗುತ್ತದೆ. ನಾವು ಪರಿಸರವನ್ನು ಕಾಪಾಡದೇ ಹೋದರೆ ಮುಂದಿನ ದಿನಮಾನಗಳಲ್ಲಿ ಜೀವನ ಸಾಗಿಸುವುದೇ ದುರಂತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ತಿರಕಮ್ಮ ಹರಿಜನ, ಉಪಾಧ್ಯಕ್ಷೆ ರತ್ನವ್ವ ಕರಿಗಾರ, ಸದಸ್ಯರಾದ ನಿಂಗವ್ವ ಹುಳ್ಯಾಳ, ಬಸಪ್ಪ ಲಮಾಣಿ, ಜೆ.ವಿ.ಪಾಟೀಲ, ಹನುಮಂತಪ್ಪ ರಾಮಣ್ಣನವರ, ಬಸನಗೌಡ ಸಂಕನಗೌಡ್ರ, ಪುಷ್ಪಾ ಹೊನ್ನತ್ತಿ, ಲಕ್ಷ್ಮಣ ದೀಪಾವಳಿ, ವಿಜಯಲಕ್ಷ್ಮಿ ಮಲ್ಲಾಡದ, ಪ್ರಕಾಶ ಶಿವಪೂರ, ಲಲಿತಾ ಹುಳ್ಯಾಳ, ತಾಪಂ ಇಒ ಶ್ಯಾಮಸುಂದರ ಕಾಂಬಳೆ, ತಾಪಂ ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ಪಿಡಿಒ ಹರೀಶ ಗೊಗ್ಗದ, ದಿಂಗಾಲೇಶ್ವರ ಅಂಗೂರ, ಆರ್.ಎನ್.ತೇಲ್ಕರ ಸೇರಿದಂತೆ ಕೂಲಿಕಾರ್ಮಿಕರು ಇದ್ದರು.