Advertisement

ವೃತಿಪರ ಕೌಶಲ್ಯ ಬೆಳೆಸಲು ಗ್ರಾಮೀಣಾಭಿವೃದ್ಧಿ ವಿವಿಯ 3 ಕೋರ್ಸ್‌

11:39 AM Aug 03, 2020 | mahesh |

ಗದಗ: ಕೋವಿಡ್ ಸಂಕಷ್ಟದಿಂದ ನಗರ-ಪಟ್ಟಣ ಪ್ರದೇಶಗಳನ್ನು ತೊರೆದು ಗ್ರಾಮಗಳತ್ತ ಮುಖಮಾಡಿರುವ ವಿದ್ಯಾವಂತರಲ್ಲಿ ವೃತ್ತಿಪರ ಕೌಶಲ್ಯ ಬೆಳೆಸಿ ಗ್ರಾಮೀಣಾಭಿವೃದ್ಧಿ ಚಿಂತನೆಗಳನ್ನು ಬಲಗೊಳಿಸಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಮುಂದಾಗಿದ್ದು, ಮೂರು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಮುಂದಾಗಿದೆ.

Advertisement

ನವೀಕರಿಸಬಹುದಾದ ಶಕ್ತಿ (ರಿನಿವೇಬಲ್‌ ಎನರ್ಜಿ), ಜಿಯೋ ಇನ್ಫ್ರಾರ್ಮೆಟಿಕ್‌ ಹಾಗೂ ಕೋ-ಆಪರೇಟಿವ್‌ ಮ್ಯಾನೇಜ್‌ಮೆಂಟ್‌ ಎಂಬ ಪಿಜಿ ಡಿಪ್ಲೋಮಾ ಕೋರ್ಸ್‌ ಪರಿಚಯಿಸಲು ಸಿದ್ಧತೆ ನಡೆದಿದೆ. ಕೊರೊನಾದಿಂದಾಗಿ ಜನರ ಜೀವನದಲ್ಲಿ ಭಾರೀ ಬದಲಾವಣೆ ಆಗಿದೆ. ದಶಕಗಳಿಂದ ಪಟ್ಟಣದಲ್ಲಿ ನೆಲೆ ಕಂಡವರೂ ಇದೀಗ ಹಳ್ಳಿ ಜೀವನವೇ ಲೇಸು ಎನ್ನುವಂತಾಗಿದೆ. ಕೋವಿಡ್ ಸೋಂಕಿನ ಪ್ರಭಾವ ತಗ್ಗಿದ ನಂತರವೂ ಹಳ್ಳಿಯಲ್ಲೇ ನೆಲೆಸಲು ಒಲವು ತೋರುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ. ಅಂತಹ ವಿದ್ಯಾವಂತ ಯುವಸಮೂಹಕ್ಕೆ, ಉದ್ಯೋಗಸ್ಥರಿಗೆ ಕೋರ್ಸ್‌ಗಳಿಂದ ಅನುಕೂಲವಾಗಲಿದೆ ಎಂಬುದು ವಿವಿ ಅಭಿಪ್ರಾಯ.

ನವೀಕರಿಸಬಹುದಾದ ಶಕ್ತಿ ಒತ್ತು: ನೈಸರ್ಗಿಕವಾಗಿ ದೊರೆಯುವ ಗಾಳಿ ಮತ್ತು ಸೂರ್ಯನ ಶಾಖದಿಂದ ವಿದ್ಯುತ್‌ ತಯಾರಿಕೆಗೆ ರಾಜ್ಯದಲ್ಲಿ ಪ್ರಶಸ್ತ ವಾತಾವರಣವಿದೆ. ಇದಕ್ಕೆ ಸಂಬಂಧಿಸಿ ಐಐಟಿ, ಎನ್‌ಐಐಟಿ, ಎಂ.ಟೆಕ್‌ ತರಗತಿಗಳಿಗೆ ಸೀಮಿತವಾಗಿರುವ ನವೀಕರಿಸಬಹುದಾದ ಶಕ್ತಿ ವಿಷಯವನ್ನು ಡಿಪ್ಲೊಮಾ ಹಂತದಲ್ಲಿ ಬೋಧಿಸಲು ವಿವಿ ಚಿಂತನೆ ನಡೆಸಿದೆ.

ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಪವನ ವಿದ್ಯುತ್‌, ಸೋಲಾರ್‌, ಗ್ರಾಮೀಣ ಭಾಗದಲ್ಲಿ ಕೃಷಿ ಹಾಗೂ ಇತರೆ ತ್ಯಾಜ್ಯಗಳಿಂದ ಬಯೋ ಗ್ಯಾಸ್‌ ಮತ್ತು ಡೀಸೆಲ್‌ ತಯಾರಿಕೆ ಹೈಡ್ರೋ ಪವರ್‌ ಕ್ಷೇತ್ರ ಉತ್ತೇಜಿಸಲು ನವೀಕರಿಸಬಹುದಾದ ಶಕ್ತಿ (ರಿನಿವೇಬಲ್‌ ಎನರ್ಜಿ) ವಿಷಯವಾಗಿ ಥಿಯರಿ ಮತ್ತು ಪ್ರಾಯೋಗಿಕ ಒಳಗೊಂಡಂತೆ 1 ವರ್ಷದ ಡಿಪ್ಲೋಮಾ ಇನ್‌ ರಿನಿವೇಬಲ್‌ ಎನರ್ಜಿ ಕೋರ್ಸ್‌ ರೂಪಿಸಿದೆ. ಈ ಕುರಿತು ಪ್ರಾಯೋಗಿಕ ತರಬೇತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಬೆಂಗಳೂರಿನ ಮಹಾತ್ಮ ಗಾಂಧಿ  ಇನ್ಸ್‌ಟಿಟ್ಯೂಟ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಪದವೀಧರರು, ಎಂಎನ್‌ಸಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವುರೊಂದಿಗೆ ಸ್ಟಾರ್ಟ್‌ಅಪ್‌ ಆರಂಭಿಸಬಹುದು.

ಜಿಯೋ ಇಇನ್ಫ್ರಾರ್ಮೆಟಿಕ್‌ ಕೋರ್ಸ್‌: ಇತ್ತೀಚೆಗೆ ಜಿಪಿಎಸ್‌, ಎಲ್‌ಬಿಎಸ್‌ ಆಧಾರಿತ ಮಾಹಿತಿಗೆ ಬೇಡಿಕೆ ಇದೆ. ಸದ್ಯ ಎಲ್ಲ ಕ್ಷೇತ್ರಗಳನ್ನು ಜಿಪಿಎಸ್‌ ಆವರಿಸಿದೆ. ಹೀಗಾಗಿ ಡೇಟಾ ಪ್ರೊಸೆಸಿಂಗ್‌, ಡೇಟಾ ಅನಾಲೈಸಿಸ್ಟ್‌ ಗಳಿಗೆ ಸರ್ಕಾರ ಮತ್ತು ಖಾಸಗಿ ವಲಯದ ಎಂಎನ್‌ಸಿ ಕಂಪನಿಗಳಲ್ಲಿ ಭಾರೀ ಬೇಡಿಕೆಯಿದೆ. ಹೀಗಾಗಿ ಜಿಯೋ ಇಇನ್ಫ್ರಾರ್ಮೆಟಿಕ್‌ ಕೋರ್ಸ್‌ ಆರಂಭಿಸಲು ವಿವಿ ಮುಂದಾಗಿದೆ. ಯಾವುದೇ ವಿಷಯದಲ್ಲಿ ಇಂಜಿನಿಯರಿಂಗ್‌, ಬಿಎಸ್ಸಿ, ಬಿಸಿಎ, ಎಂಸಿಎ, ಪದವಿಯಲ್ಲಿ ಐಚ್ಛಿಕವಾಗಿ ಜಿಯೋಗ್ರಾಫಿ, ಪ್ರಾಣಿಶಾಸ್ತ್ರ ಓದಿದವರು ಈ ಕೋರ್ಸ್‌ ಅಭ್ಯಸಿಸಬಹುದಾಗಿದ್ದು, ಸ್ಥಳೀಯವಾಗಿಯೇ ಡೇಟಾ ಏಜೆನ್ಸಿ ಆರಂಭಿಸಲು ವಿಫುಲ ಅವಕಾಶಗಳಿವೆ ಎನ್ನಲಾಗಿದೆ.

Advertisement

ಕೋ-ಆಪರೇಟಿವ್‌ ಮ್ಯಾನೇಜ್‌ಮೆಂಟ್‌: ಸಹಕಾರ ಕ್ಷೇತ್ರದ ತೊಟ್ಟಿಲು ಎನ್ನಲಾಗುವ ಗದಗ ಜಿಲ್ಲೆಯಲ್ಲಿ ಡಿಪ್ಲೋಮಾ ಇನ್‌ ಕೋ-ಆಪರೇಟಿವ್‌ ಮ್ಯಾನೇಜ್‌ ಮೆಂಟ್‌ ಕೋರ್ಸ್‌ ಆರಂಭಿಸುವ ಮೂಲಕ ಈ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಬಡ್ತಿ ನಿರೀಕ್ಷೆಯಲ್ಲಿರುವವರಿಗೆ ಭರವಸೆ ಮೂಡಿಸಿದೆ. ರಾಜ್ಯದ ಒಂದೆರಡು ವಿವಿಯಲ್ಲಿ ಕೋ-ಆಪ್‌ರೇಟಿವ್‌ ವಿಷಯವಾಗಿ ಪದವಿಗಳಿದ್ದರೂ, ಸರ್ಕಾರಿ ನೇಮಕಾತಿಗೆ ಪರಿಗಣನೆಗೆ ಬರುತ್ತಿಲ್ಲ. ಯುಜಿಸಿ ಅಂಗೀಕೃತ ವಿವಿಯಲ್ಲೇ ಕೋ-ಆಪರೇಟಿವ್‌ ಮ್ಯಾನೇಜ್‌ ಮೆಂಟ್‌ ಕೋರ್ಸ್‌ ಆರಂಭಿಸುತ್ತಿರುವುದರಿಂದ ವಿವಿಧ ಸಹಕಾರ ಬ್ಯಾಂಕ್‌ಗಳ ನೌಕರರು, ಉದ್ಯೋಗಾಕಾಂಕ್ಷಿಗಳಿಗೆ ಇದು ಉಪಯುಕ್ತವಾಗಲಿದೆ.

ಒಟ್ಟಾರೆ ಈ ಎಲ್ಲ ಕೋರ್ಸ್‌ಗಳು ಗ್ರಾಮೀಣ ಬೇರು, ಜಾಗತಿಕ ಮೇರು ಬೆಸೆಯುವ ಕೊಂಡಿಗಳಂತಿವೆ. ಇದರಿಂದ ಯುವ ಸಮೂಹಕ್ಕೆ ಹೆಚ್ಚಿನ ಅನುಕೂಲವಾಗುವುದರೊಂದಿಗೆ ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಗೆ ಮತ್ತಷ್ಟು ಬಲ ತುಂಬಲಿದೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.

10 ಸ್ನಾತಕೋತ್ತರ ಕೋರ್ಸ್‌: 2017-18ನೇ ಸಾಲಿನಲ್ಲಿ ಆರಂಭಗೊಂಡಿರುವ ಈ ವಿವಿಯಲ್ಲಿ ಈಗಾಗಲೇ ವಿವಿಧ 10 ಸ್ನಾತಕೋತ್ತರ ಕೋರ್ಸ್‌ಗಳಿದ್ದು, ಇದೇ ಮೊದಲ ಬಾರಿಗೆ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ ಪರಿಚಯಿಸಲಾಗುತ್ತಿದೆ. ವಿವಿಧ ವಿಭಾಗಗಳಲ್ಲಿ ಸದ್ಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ನಾಡಿನ ಗ್ರಾಮೀಣ ಭಾಗದ ಸಂಪನ್ಮೂಲ ಉನ್ನತೀಕರಿಸುವ ನಿಟ್ಟಿನಲ್ಲಿ ಕುಲಪತಿ ಪ್ರೊ| ವಿಷ್ಣುಕಾಂತ ಎಸ್‌. ಚಟಪಲ್ಲಿ ವಿವಿಧ ಡಿಪ್ಲೋಮಾ ಕೋರ್ಸ್‌ಗಳನ್ನು ರೂಪಿಸಿದ್ದಾರೆ. ಬರುವ ಸೆಪ್ಟೆಂಬರ್‌ನಿಂದ ಶೈಕ್ಷಣಿಕ ಪ್ರವೇಶ ಆರಂಭಗೊಳ್ಳಲಿವೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಉಮೇಶ್‌ ಬಾರಕೇರ್‌, ಗ್ರಾವಿವಿ ವಿಶೇಷಾಧಿಕಾರಿ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next