ಕೊಪ್ಪಳ: ಬಿಟ್ ಕಾಯಿನ್ ವಿಚಾರದಲ್ಲಿ ರಾಜ್ಯದಲ್ಲಿ ನಮ್ಮ ನಾಯಕರು, ಎಂಎಲ್‌ಎ, ಮಂತ್ರಿ ಸೇರಿ ಯಾರ ಮೇಲೆ ಆಪಾದನೆಯಿದ್ರೂ ಕೂಡ ಅವರ ದಾಖಲೆ ಕೊಡಿ, ತುರ್ತು ಕ್ರಮ ಕೈಗೊಳ್ಳುತ್ತೇವೆ. ಮಂತ್ರಿಯಾಗಿದ್ದರೂ ಒಂದು ನಿಮಿಷವೂ ತಡ ಮಾಡದೇ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್‌ನವರು ಸ್ಪರ್ಧಾತ್ಮಕವಾಗಿ ಮಾತನಾಡುತ್ತಿದ್ದಾರೆ. ಸಿದ್ದು, ಡಿಕೆಶಿ, ಪ್ರಿಯಾಂಕ ಸಹ ಮಾತಾಡುತ್ತಿದ್ದಾರೆ. ಯಾರೊಬ್ಬರೂ ಒಂದು ತುಂಡು ಪೇಪರ್ ದಾಖಲೆ ಕೊಟ್ಟಿಲ್ಲ. ಸಿಎಂ ಬಗ್ಗೆ ಮಾತನಾಡಿದ್ರೆ ಬಹಳ ದೊಡ್ಡವರಾಗುತ್ತೇವೆ ಎನ್ನುವವರು ಅವರು. ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ. ಐಎಎಸ್ ಅಧಿಕಾರಿಗಳಿದ್ದರೂ ಸಹ ದಾಖಲೆ ಕೊಡಿ ಎಂದರು.
ಗೃಹ ಸಚಿವರೂ ಬಿಟ್ ಕಾಯಿನ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಟ್ ಕಾಯಿನ್ ವಿಚಾರ ತನಿಖೆಯ ಆದೇಶದ ಕುರಿತು ಸಿಎಂ, ಗೃಹ ಸಚಿವರು ಯಾವಾಗ ಆದೇಶ ಮಾಡಬೇಕೋ ಅವಾಗ ಮಾಡ್ತಾರೆ. ಸಿದ್ದರಾಮಯ್ಯರು ಬಿಟ್ ಕಾಯಿನ್ ವಿಚಾರದಲ್ಲಿ ಹಿಟ್ ಅಂಡ್ ರನ್ ಮಾಡಬೇಡಿ. ನಿಮ್ಮಲ್ಲಿ ದಾಖಲೆ ಇದ್ದರೆ ಈಗಲೇ ಕೊಡಿ. ನೀವೂ ವಕೀಲರೆ ತಾನೇ ಕೋರ್ಟ್‌ನಲ್ಲಿ ಕೇಸ್ ಹಾಕಿ. ಯಾರು ಬೇಡ ಅಂದವರು ಎಂದು ಸಿದ್ದುಗೇ ತಿರುಗೇಟು ನೀಡಿದರು.
ಮುಂದಿನ ಚುನಾವಣೆಯ ವರೆಗೂ ಬೊಮ್ಮಾಯಿ ಅವರೇ ಸಿಎಂ ಆಗಿ ಇರುತ್ತಾರೆ. ಅವರ ಬದಲಾವಣೆ ಇಲ್ಲ. ಕಾಂಗ್ರೆಸ್‌ನಲ್ಲೂ ಮೂರು ಮೂರು ಸಿಎಂರನ್ನು ಮಾಡಿದ್ದು ಉದಾಹರಣೆಯಿದೆ. ಇನ್ನು ಪ್ರಿಯಾಂಕ ಖರ್ಗೆ ಗೃಹ ಇಲಾಖೆ ವಸೂಲಿ ಇಲಾಖೆ ಎಂಬ ಮಾತು ತರವಲ್ಲ. ಅವರೇ ಅವರ ಭಾಗದಲ್ಲಿ ವಸೂಲಿ ಕಿಂಗ್ ಆಗಿದ್ದಾರೆ. ವಸೂಲಿ ದಂಧೆ ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ವಸೂಲಿ ಬಗ್ಗೆ ಮಾತನಾಡಿದ್ದಾರೆ. ಗೃಹ ಸಚಿವರಿಗೆ ವಸೂಲಿ ದಂಧೆ ಗೊತ್ತಿಲ್ಲ. ವಸೂಲಿಯೂ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ಬದುಕಿದೆ, ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಬಿಟ್ ಕಾಯಿನ್ ಬಗ್ಗೆ ಅವರು ಕಾಂಗ್ರೆಸ್ ನಾಯಕರು ಮಾತನ್ನಾಡುತ್ತಿದ್ದಾರೆ. ವಿವಿಧ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಮುಳುಗಿ ಹೋಗುವ ಹಡಗು. ಹಾನಗಲ್‌ನಲ್ಲೂ ಅವರು ಸೋತಿದ್ದರೆ ಕಾಂಗ್ರೆಸ್ ಮುಗಿದು ಹೋಗುತ್ತಿತ್ತು. ಪ್ರಚಾರಕ್ಕಾಗಿ ಪ್ರತಿ ದಿನವೂ ಮಾತನಾಡುತ್ತಿದ್ದಾರೆ ಎಂದರು.
ಈ ವೇಳೆ ಸಚಿವ ಹಾಲಪ್ಪ ಆಚಾರ್, ಸಿ.ವಿ.ಚಂದ್ರಶೇಖರ ಸೇರಿ ಇತರರು ಉಪಸ್ಥಿತರಿದ್ದರು.