Advertisement

ಆ.1ರಿಂದ ಜಿಲ್ಲೆಯಲ್ಲಿ ಗ್ರಾಮೀಣ ಸ್ವಚ್ಛ ಸರ್ವೇಕ್ಷಣೆ ಆರಂಭ

12:19 PM Jul 24, 2018 | |

ಮೈಸೂರು: ಶುಚಿತ್ವ, ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಜನ ಸಮುದಾಯಕ್ಕೆ ಅರಿವು ಮೂಡಿಸುವ ದೃಷ್ಟಿಯಿಂದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ಗ್ರಾಮೀಣ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಕೈಗೊಂಡಿರುವ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018, ಆ.1ರಿಂದ 30ರವರೆಗೆ ನಡೆಯಲಿದೆ.

Advertisement

ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಸಂಬಂಧ ಮೈಸೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್‌ ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ದೇಶಾದ್ಯಂತ 680 ಜಿಲ್ಲೆಗಳು, 6980 ಗ್ರಾಮಗಳು, 34 ಸಾವಿರ ಸಾರ್ವಜನಿಕ ಸ್ಥಳಗಳು ಹಾಗೂ 50 ಲಕ್ಷ ರೂ. ನಾಗರಿಕರ ಸಂದರ್ಶನ ಮತ್ತು ಅಭಿಪ್ರಾಯಗಳನ್ನು ಈ ಸರ್ವೇಕ್ಷಣೆಯಲ್ಲಿ ಪಡೆಯಲಾಗುತ್ತದೆ ಎಂದು ಹೇಳಿದರು.

ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸಮುದಾಯದಲ್ಲಿನ ಸ್ವಚ್ಛತೆಯ ದೃಷ್ಟಿಕೋನ ಸೇರಿದಂತೆ ವಿವಿಧ ಮಾನದಂಡಗಳನ್ನು ಅನುಸರಿಸಿ ಶ್ರೇಯಾಂಕಗಳನ್ನು ನೀಡಲಾಗುತ್ತದೆ. ಉತ್ತಮ ಶ್ರೇಣಿ ಪಡೆದ ಜಿಲ್ಲೆಗಳಿಗೆ ಅ.2ರಂದು ನವದೆಹಲಿಯಲ್ಲಿ ನಡೆಯುವ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಪುರಸ್ಕಾರ ನೀಡಲಿದೆ ಎಂದರು.

ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಸಂಬಂಧ ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ. ಗ್ರಾಮೀಣ ಸ್ವಚ್ಛ ಭಾರತ ಮಿಷನ್‌ ಯೋಜನೆಯ ಐಎಂಐಎಸ್‌ ನಲ್ಲಿನ ಪ್ರಗತಿಯ ದತ್ತಾಂಶಗಳಿಗೆ ಶೇ.35 ಅಂಕಗಳು,

Advertisement

ನಾಗರಿಕರು ನೀಡುವ ಮಾಹಿತಿಯ ಆಧಾರದಲ್ಲಿ ಅಂಕಿಅಂಶಗಳ ಸಂಗ್ರಹಣೆಗೆ ಶೇ.35 ಅಂಕಗಳು, ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೆ, ಬಸ್‌ ನಿಲ್ದಾಣ ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ನೇರ ಪರಿವೀಕ್ಷಣೆಗೆ ಶೇ.30 ಅಂಕಗಳನ್ನು ನಿಗದಿಪಡಿಸಿದೆ.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ನೇಮಿಸಿರುವ ಖಾಸಗಿ ಸಂಸ್ಥೆಗಳು, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ಪ್ರಾಯೋಜಕತ್ವದ ಸಂಸ್ಥೆಗಳು, ಜಿಪಿಎಸ್‌ ಮುಖಾಂತರ ಸ್ಥಳ ಆಯ್ಕೆ ಮಾಡಿಕೊಂಡಡು ಸಮೀಕ್ಷೆ ನಡೆಸಲಿವೆ ಎಂದು ತಿಳಿಸಿದರು.

ಸರ್ವೇಕ್ಷಣೆ ಆರಂಭಕ್ಕೆ ಕೇವಲ ಒಂದು ವಾರ ಉಳಿದಿರುವುವರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಅರಿವಿನ ಮಟ್ಟ ಹೆಚ್ಚಿಸುವ ಕಾರ್ಯಕ್ರಮ ಯೋಜಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಯೋಜನಾ ನಿರ್ದೇಶಕ ಲೋಕನಾಥ್‌, ಜಿಪಂ ಉಪ ಕಾರ್ಯದರ್ಶಿ ಶಿವಲಿಂಗೇಗೌಡ, ಡಿಎಚ್‌ಒ ಡಾ.ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಜಿಪಂ ಯೋಜನಾ ವಿಭಾಗದ ರಾಣಿ ಮೊದಲಾದವರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next