Advertisement

ಗ್ರಾಮೀಣ ಮಕ್ಕಳೇ ಹೆಚ್ಚು ಪ್ರತಿಭಾವಂತರು

09:05 PM Sep 11, 2019 | Lakshmi GovindaRaju |

ಹನೂರು: ನೂತನ ತಾಲೂಕಾಗಿರುವ ಹನೂರು ತಾಲೂ ಕು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಇಲ್ಲಿನ ಮಕ್ಕಳಲ್ಲಿ ಉತ್ತ ಮ ಸಾಮರ್ಥ್ಯ ಮತ್ತು ಪ್ರತಿಭೆಯಿದೆ. ಆ ಪ್ರತಿಭೆ ಹೊರತರುವಲ್ಲಿ ಕ್ರೀಡೆಯೂ ಪ್ರಮುಖ ಪಾತ್ರವಹಿಸಲಿದ್ದು, ಕ್ರೀಡಾಕೂಟಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಅನಾವರಣಗೊಳ್ಳಬೇಕು ಎಂದು ಶಾಸಕ ಆರ್‌.ನರೇಂದ್ರ ಹೇಳಿದರು.

Advertisement

ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಪಂ ಚಾಮರಾಜನಗರ ವತಿಯಿಂದ 2019-20ನೇ ಸಾಲಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂ ಕು ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕ್ರೀಡೆಯಿಂದ ಮಾನಸಿಕ ಸಮತೋಲನ: ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಕ್ರೀಡೆ ಬಹುಮುಖ್ಯ ಪಾತ್ರವಹಿಸುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯಗಳಿಸಬಹುದಾಗಿದೆ. ದೈಹಿಕ ಸಾಮರ್ಥ್ಯ ಸಮರ್ಥವಾಗಿದ್ದಲ್ಲಿ ಮಾನಸಿಕ ಸಮತೋಲನವನ್ನೂ ಕಾಯ್ದುಕೊಳ್ಳಬಹುದು. ಇದರಿಂದ ಏಕಾಗ್ರತೆ ದೊರೆತು ಓದಿನ ಕಡೆ ಹೆಚ್ಚಿನ ಗಮನವನ್ನೂ ಹರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಶಿಕ್ಷಕರು ಮಕ್ಕಳ ಪ್ರತಿಭೆ ಹೊರತನ್ನಿ: ಹನೂರು ತಾಲೂ ಕು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದರೂ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದಾರೆ. ಈ ಭಾಗದಲ್ಲಿ ಇನ್ನೂ ಉತ್ತಮ ಸಾಮರ್ಥ್ಯ ಮತ್ತು ಪ್ರತಿಭೆವುಳ್ಳ ವಿದ್ಯಾರ್ಥಿಗಳಿದ್ದು ಕ್ರೀಡಾಕೂಟಗಳ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಅನಾವರಣ ಮಾಡಬೇಕು. ಅಂತೆಯೇ ವಿದ್ಯಾರ್ಥಿಗಳೂ ಸಹ ಕ್ರೀಡಾಕೂಟದಲ್ಲಿ ಭಾಗವಹಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸೋಲೆ ಗೆಲುವಿನ ಸೋಪಾನ ಎಂದು ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.

ಆಕರ್ಷಕ ಪಥ ಸಂಚಲನ: ಕಾರ್ಯಕ್ರಮದಲ್ಲಿ ಧ್ವ‌ಜಾರೋಹಣದ ಬಳಿಕ ವಿವೇಕಾನಂದ ಶಾಲೆ, ಕ್ರಿಸ್ತರಾಜ ಶಾಲೆ, ಸಂತ ಅಂಥೋಣಿ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು. ಬಳಿಕ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ತಾಪಂ ಅಧ್ಯಕ್ಷ ಕ್ರೀಡಾಜ್ಯೋತಿ ಬೆಳಗಿದರು. ಇದೇ ವೇಳೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ದೈಹಿಕ ಶಿಕ್ಷಕರು ಕ್ರೀಡೆಯಲ್ಲಿ ನಮ್ಮವರು ತಮ್ಮವರು ಎಂದು ಭೇದ ಭಾವವಿಲ್ಲದೆ ನಿಷ್ಪಕ್ಷಪಾತವಾಗಿ ತೀರ್ಪು ಪ್ರಕಟಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Advertisement

ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ: ಹನೂರು ನೂತನ ತಾಲೂಕು ಕೇಂದ್ರವಾಗಿದ್ದರೂ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿರುವ ದಸರಾ ಕ್ರೀಡಾಕೂಟವನ್ನು ಹನೂರು ಕೇಂದ್ರದಲ್ಲಿ ಆಯೋಜಿಸಿರದ ಬಗ್ಗೆ ಮಾಧ್ಯಮದವರ ಪ್ರ‌ಶ್ನೆಗೆ ಉತ್ತರಿಸಿದ ಶಾಸಕ ನರೇಂದ್ರ, ಸರ್ಕಾರ ಬರ್‌ಬಾದ್‌ ಆಗಿಹೋಗಿದ್ದು ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ 53 ತಾಲೂ ಕು ಕೇಂದ್ರಗಳನ್ನು ರಚಿಸಲಾಗಿತ್ತು. ಬಳಿಕ ನೂತನ ತಾಲೂಕಾದ ಹನೂರಿಗೆ ಗ್ರೇಡ್‌-1 ತಹಶೀಲ್ದಾರ್‌, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕ ಮಾಡಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಆದೇಶ ಹೊರಡಿಸಲಾಗಿತ್ತು.

ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೂತನ ತಾಲೂಕು ಕೇಂದ್ರಗಳಿಗೆ ಯಾವುದೇ ಅಧಿಕಾರಿಗಳನ್ನು ನೇಮಕ ಮಾಡಬಾರದು ಮತ್ತು ಹೊಸ ಕಚೇರಿಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ಆರ್ಥಿಕ ಇಲಾಖೆಗೆ ಜ್ಞಾಪನಾ ಪತ್ರ ನೀಡಿದೆ. ಈ ಹಿನ್ನೆಲೆ ನೂತನ ತಾಲೂಕುಗಳಿಗೆ ನೀಡಬೇಕಿದ್ದ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಿಡಿಕಾರಿದರು.

ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯೆ ಮರುಗದಮಣಿ, ತಾಪಂ ಅಧ್ಯಕ್ಷ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಪಪಂ ಸದಸ್ಯರಾದ ಹರೀಶ್‌ಕುಮಾರ್‌, ಸಂಪತ್‌, ಸೋಮಣ್ಣ, ಗಿರೀಶ್‌, ನಾಗರಾಜು, ಮಹೇಶ್‌, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಿವಮಲ್ಲು, ನಂಜುಂಡಸ್ವಾಮಿ, ಗುರುಸ್ವಾಮಿ, ಕೃಷ್ಣೇಗೌಡ, ದೈಹಿಕ ಶಿಕ್ಷಕರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next