Advertisement
ಈವರೆಗೆ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಬ್ಯಾಂಕ್‌ಗಳ ಸಿಬಂದಿ ನೇಮಕಾತಿ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ಸಹಿತ 13 ಪ್ರಾಂತೀಯ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಗುರುವಾರ ಘೋಷಿಸಿದರು.
Related Articles
Advertisement
ಸೌಲಭ್ಯ ವಿಸ್ತರಣೆಗೆ ಆಗ್ರಹ
ವಿತ್ತ ಸಚಿವರ ಘೋಷಣೆಯನ್ನು ಸ್ವಾಗತಿಸಿದ ರಾಜ್ಯಸಭೆ ಸಂಸದ ಎಲ್. ಹನುಮಂತಯ್ಯ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ, ರಾಷ್ಟ್ರೀಯ ಬ್ಯಾಂಕ್‌ಗಳ ಸಿಬಂದಿ ನೇಮಕಾತಿಗೂ ಅನ್ವಯವಾಗುವಂತಾಗಲಿ ಎಂದು ಆಶಿಸಿದರು.
ಗಡುವು ಮುಗಿದ ದಿನವೇ ಘೋಷಣೆ!
ಆರ್‌ಆರ್‌ಬಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಹೊತ್ತಿದೆ. ಪ್ರಸಕ್ತ ವರ್ಷದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸಿಬಂದಿ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜು. 4ರಂದು ಕೊನೆಯ ದಿನವಾಗಿತ್ತು. ಇದೇ ದಿನ ವಿತ್ತ ಸಚಿವರು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಒಪ್ಪಿಗೆ ಘೋಷಿಸಿದ್ದಾರೆ. ಹೀಗಾಗಿ ಈ ವರ್ಷ ನಡೆಯುತ್ತದೆಯೋ ಅಥವಾ ಮುಂದಿನ ವರ್ಷವೋ ಎಂಬ ಬಗ್ಗೆ ಖಾತ್ರಿಯಾಗಿಲ್ಲ. ಒಂದು ವೇಳೆ ಐಬಿಪಿಎಸ್ ಎಲ್ಲ ಸಿದ್ಧತೆ ಮಾಡಿಕೊಂಡರೆ ಈ ವರ್ಷ ನಡೆಸಬಹುದು. ಈಗಾಗಲೇ ಪ್ರಕಟಿಸಿರುವಂತೆ ಈ ವರ್ಷದ ಪರೀಕ್ಷೆಗಳು ಆ. 3, 4, 11, 17, 18ರಂದು ನಡೆಯಲಿವೆ.
ಹೊಸ ಭಾಷೆಗಳು ಯಾವುವು?
ಕನ್ನಡ, ತೆಲುಗು, ತಮಿಳು, ಬಂಗಾಲಿ, ಅಸ್ಸಾಮಿ, ಗುಜರಾತಿ, ಕೊಂಕಣಿ, ಮಲಯಾಳ, ಮಣಿಪುರಿ, ಮರಾಠಿ, ಒರಿಯಾ, ಪಂಜಾಬಿ ಹಾಗೂ ಉರ್ದು. ಹಾಗೆಯೇ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲೂ ಪರೀಕ್ಷೆಗಳು ಮುಂದುವರಿಯಲಿವೆ.
ಎಲ್ಲರ ಪ್ರಯತ್ನಕ್ಕೆ ಫಲ ದೊರಕಿದ್ದು, ಕನ್ನಡ ಭಾಷೆಗೆ ಜಯ ಸಿಕ್ಕಿದೆ. ಇದಕ್ಕಾಗಿ ನಾಡಿನ ಸಮಸ್ತ ಜನರ ಪರವಾಗಿ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಕೇಂದ್ರದ ನಿರ್ಧಾರ ಸ್ವಾಗತಿಸುತ್ತೇನೆ. ಸ್ಥಳೀಯ ಬ್ಯಾಂಕ್‌ಗಳಿಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು 1ರಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಓದಿರಲೇಬೇಕೆಂಬ 2014ರ ನಿಯಮ ಹಿಂಪಡೆದರೆ ಕನ್ನಡಿಗರಿಗೆ ಇನ್ನಷ್ಟು ಅನುಕೂಲವಾಗುತ್ತದೆ.
– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ