ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರು ಸೋಮವಾರ ಮಾಮಾಸ್ ಜಾಯಿಂಟ್ ರಸ್ತೆಯಲ್ಲಿನ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು 3ದಿನದ ಮುಷ್ಕರ ಆರಂಭಿಸಿದ್ದಾರೆ.
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಪ್ರಗತಿ ಕೃಷ್ಣಾ ಬ್ಯಾಂಕ್ ಅಧಿಕಾರಿಗಳ ಸಂಘಗಳ ಸಮನ್ವಯ ಹಾಗೂ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಆರಂಭಿಸಿದ ಮುಷ್ಕರದ ಸಂದರ್ಭದಲ್ಲಿ ನೌಕರರು, ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರುತ್ತಿರುವ ಬದಲಾವಣೆಯಿಂದ ಗ್ರಾಮೀಣ ಬ್ಯಾಂಕ್ ನ ಸ್ವರೂಪ ಬದಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ತೊಂದರೆ ಆಗಲಿದೆ ಎಂದು ಆರೋಪಿಸಿ, ಘೋಷಣೆ ಕೂಗಿದರು.
ಪ್ರೇರಕ ಬ್ಯಾಂಕ್‌ನ ನಿವೃತ್ತಿ ಯೋಜನೆಯನ್ನು ನಮಗೂ ಜಾರಿಗೊಳಿಸಬೇಕು. ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ಕೈ ಬಿಡಬೇಕು. ಅನುಕಂಪ ಆಧಾರಿತ ನೇಮಕಾತಿ ಪದ್ಧರಿ ಜಾರಿ, ಪ್ರೇರಕ ಬ್ಯಾಂಕ್‌ನಲ್ಲಿನ ಸೇವಾ ನಿಯಮ, ನೇರ ನೇಮಕಾತಿ, ಬಡ್ತಿ ಯೋಜನೆಯನ್ನು ನಮ್ಮ ಬ್ಯಾಂಕ್‌ನಲ್ಲೂ ಅನುಷ್ಠಾನಗೊಳಿಸಲು ಮುಷ್ಕರನಿರತ ಸಂಘ, ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು. ಈ ಬೇಡಿಕೆ ಈಡೇರಿಕೆಗೆ ಹಲವು ಬಾರಿ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಮೂರು ದಿನಗಳ ಮುಷ್ಕರ ಆರಂಭಿಸಲಾಗಿದ್ದು, ಈಗಲಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಯತ್ನಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಸುಭಾಷಚಂದ್ರ, ಕರಿಬಸಪ್ಪ ದಪ್ಪೇರ್, ಮಹಾಬಲೇಶ್, ಎಸ್. ನಾಗರಾಜ್, ಶ್ರೀಧರ್,
ನಾಗೇಶ್ವರಿ ನಾಯರಿ, ವಿರೂಪಾಕ್ಷಯ್ಯ, ಈಶ್ವರಪ್ಪ ಮುಷ್ಕರದಲ್ಲಿ ಭಾಗವಹಿಸಿದ್ದರು.