ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ಸೋಮವಾರ ಸಾರ್ವಕಾಲಿಕ ದಾಖಲೆ ಎಂಬ ರೀತಿಯಲ್ಲಿ ಡಾಲರ್ ಮುಂದೆ ರೂಪಾಯಿ ಮೌಲ್ಯ 77.41 ರೂ.ಗೆ ಇಳಿಕೆಯಾಗಿತ್ತು. ಹಾಗಾದರೆ ಈ ರೂಪಾಯಿ ಮೌಲ್ಯ ಇಳಿಕೆ ಅಥವಾ ಏರಿಕೆಯಾಗುವುದರಿಂದ ಆಗುವ ನಷ್ಟಗಳೇನು? ಲಾಭಗಳೇನು? ಎಂಬ ಪುಟ್ಟ ಮಾಹಿತಿ ಇಲ್ಲಿದೆ…
ಡಾಲರ್ ಮೌಲ್ಯ ಏರಿಕೆಯಾಗುತ್ತಿರುವುದೇ?
ಅಮೆರಿಕದ ಆರ್ಥಿಕತೆ ಸುಭದ್ರ ಎಂಬ ನಂಬಿಕೆ ಫಾರೆಕ್ಸ್ ಮಾರುಕಟ್ಟೆಯಲ್ಲಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಅನ್ನೇ ವಹಿವಾಟಿಗಾಗಿ ಬಳಸಿಕೊಳ್ಳುತ್ತಿರುವುದರಿಂದ ಇದಕ್ಕೆ ಹೆಚ್ಚು ಡಿಮ್ಯಾಂಡ್ ಕೂಡ ಇದೆ. ಹೀಗಾಗಿಯೇ ಹೂಡಿಕೆದಾರರು ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಅನ್ನು ಹೆಚ್ಚಾಗಿ ಖರೀದಿಸುತ್ತಾರೆ. ಇದರ ಜತೆಗೆ ರಷ್ಯಾ-ಉಕ್ರೇನ್ ಯುದ್ಧ, ರಷ್ಯಾ ಮೇಲಿನ ದಿಗ್ಬಂಧನ, ಚೀನ ಲಾಕ್‌ಡೌನ್, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ನ ಆರ್ಥಿಕತೆ ಕುಸಿತ, ತೈಲ ದರದಲ್ಲಿ ಏರಿಕೆಯಿಂದಾಗಿ ಡಾಲರ್ ಮೌಲ್ಯ ಏರಿಕೆಯಾಗುತ್ತಿದೆ.
ಆರ್‌ಬಿಐ ಸ್ಪಂದನೆ ಏನು?
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದ್ದಂತೆ, ಆರ್‌ಬಿಐ, ತನ್ನ ಸಂಗ್ರಹದಲ್ಲಿರುವ ಡಾಲರ್ ಅನ್ನು ಫಾರೆಕ್ಸ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟ ಮಾಡುತ್ತದೆ. ಆಗ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುವುದನ್ನು ಒಂದಷ್ಟು ನಿಯಂತ್ರಣ ಮಾಡುತ್ತದೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಾದ ಬಳಿಕವೂ ಆರ್‌ಬಿಐ, ಡಾಲರ್ ಅನ್ನು ಹೆಚ್ಚಾಗಿ ಹರಿಯಬಿಟ್ಟಿತ್ತು.
ರೂಪಾಯಿ ಸ್ಥಿರತೆ ಮುಖ್ಯವೇ?
ಹೌದು. ಕರೆನ್ಸಿ ಸ್ಥಿರವಾಗಿದ್ದಷ್ಟೂ ರಫ್ತು ಮತ್ತು ಆಮದಿಗೆ ಒಳ್ಳೆಯದಾಗುತ್ತದೆ. ರೂಪಾಯಿ ಸ್ಥಿರವಾಗಿದ್ದಾಗ ಬೃಹತ್ ವಲಯದ ಉತ್ಪನ್ನಗಳ ರಫ್ತು ಚೆನ್ನಾಗಿರುತ್ತದೆ. ಐಟಿ ಮತ್ತು ಫಾರ್ಮಾ ಕಂಪೆನಿಗಳಿಗೆ ಹೆಚ್ಚಿನ ಹಣ ಸಿಗುತ್ತದೆ. ಅಂದರೆ ಫಾರಿನ್ ಕರೆನ್ಸಿಯನ್ನು ಭಾರತದ ರೂಪಾಯಿಗೆ ಬದಲಿಸಿಕೊಂಡಾಗ ಹೆಚ್ಚು ಹಣ ರಫ್ತುದಾರರ ಪಾಲಾಗುತ್ತದೆ. ಆದರೆ ರೂಪಾಯಿ ಮೌಲ್ಯ ಕಡಿಮೆಯಾದೊಡನೆ, ಆಮದು ಮಾಡಿಕೊಳ್ಳುವಾಗ ನಷ್ಟವುಂಟಾಗುತ್ತದೆ. ಅಂದರೆ ಪೆಟ್ರೋಲಿಯಂ, ಜೆಮ್ಸ್ ಮತ್ತು ಆಭರಣಗಳ ಮೇಲೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಅಂದರೆ ವಿದೇಶಿ ಕರೆನ್ಸಿಯಲ್ಲೇ ಪಾವತಿ ಮಾಡಬೇಕಾಗಿರುವುದರಿಂದ ಡಾಲರ್ ಎದುರಾಗಿ ಹೆಚ್ಚು ಹಣ ನೀಡಬೇಕಾಗುತ್ತದೆ.