ನವದೆಹಲಿ/ಲಂಡನ್/ವಾಷಿಂಗ್ಟನ್: ಅಮೆರಿಕದ ಫೆಡರಲ್ ರಿಸರ್ವ್ ಬುಧವಾರ ಬಡ್ಡಿದರವನ್ನು ಶೇ.0.75 ಹೆಚ್ಚಳ ಮಾಡಿದೆ. ಸತತ ಮೂರನೇ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುತ್ತಿರುವ ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂದು ಫೆಡರಲ್ ರಿಸವರ್ಸ್ ಹೇಳಿಕೆಯಲ್ಲಿ ಪ್ರತಿಪಾದಿಸಿದೆ.
ಹೊಸ ನಿರ್ಧಾರದಿಂದ ಬಡ್ಡಿ ಪ್ರಮಾಣ ಶೇ.3ರಿಂದ ಶೇ.3.25ಕ್ಕೆ ಏರಿಕೆಯಾಗಿದೆ. 2008ರ ಬಳಿಕ ಗರಿಷ್ಠ ಪ್ರಮಾಣದ ಏರಿಕೆ ಇದಾಗಿದೆ.
ಅದಕ್ಕೆ ಪೂರಕವಾಗಿ ಗುರುವಾರ ಮುಂಬೈನ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ದಾಖಲೆಯ ಅಂದರೆ 90 ಪೈಸೆ ಕುಸಿತ ಕಂಡಿದೆ. ದಿನದ ಆರಂಭದಲ್ಲಿ ಡಾಲರ್ ಎದುರು 80.27 ರೂ.ಗೆ ವಹಿವಾಟು ಆರಂಭಿಸಿ ದಿನದ ಮುಕ್ತಾಯದಲ್ಲಿ 80.86 ರೂ.ಗೆ ಮುಕ್ತಾಯ ಕಂಡಿತು.
ಈ ಕುಸಿತ ಫೆ.24ರ ಬಳಿಕದ ಅತ್ಯಂತ ದೊಡ್ಡ ಕುಸಿತವಾಗಿದೆ. ಹಣಕಾಸು ವಿಶ್ಲೇಷಕರ ಪ್ರಕಾರ ಅಮೆರಿಕದ ಡಾಲರ್ ಎದುರು ರೂಪಾಯಿ ಕುಸಿತ ಇನ್ನೂ ಮುಂದುವರಿಯಲಿದೆ.
ಬಡ್ಡಿದರ ಏರಿಕೆ: ಈ ನಡುವೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿ ದರವನ್ನು ಶೇ.0.50 ಏರಿಕೆ ಮಾಡಿದೆ. ಹೀಗಾಗಿ, ಬಡ್ಡಿ ಪ್ರಮಾಣ ಶೇ.1.75ರಿಂದ ಶೇ.2.25ಕ್ಕೆ ಏರಿಕೆಯಾಗಿದೆ. ಈ ಏರಿಕೆ 14 ವರ್ಷಗಳಿಗೆ ಹೋಲಿಕೆ ಮಾಡಿದರೆ, ಗರಿಷ್ಠದ್ದಾಗಿದೆ. ಅದಕ್ಕೆ ಪೂರಕವಾಗಿ ಸ್ವಿಜರ್ಲೆಂಡ್‌ನಲ್ಲಿ ಕೂಡ ಬಡ್ಡಿದರ ಶೇ.0.75 ಹೆಚ್ಚಿಸಲಾಗಿದೆ.