ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದೆ. ಜನಸಾಮಾನ್ಯರಿಗೆ ರೂಪಾಯಿ ಮೌಲ್ಯದ ಏರಿಳಿಕೆಯ ಒಳ ಸುಳಿಗಳು ಗೊತ್ತಾಗದೇ ಇದ್ದರೂ, ಅವರ ನಿತ್ಯ ವಹಿವಾಟಿಗೆ ತೊಂದರೆಯಾಗಿರುವುದಂತೂ ಸತ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಡಾಲರ್ ಮೂಲಕವೇ ಪಾವತಿ ಮಾಡಲಾಗುತ್ತದೆ. ಹೀಗಾಗಿ, ಸದ್ಯ ಕೊಂಚ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾದ ಜರೂರತ್ತು ಬಂದೊದಗಿದೆ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರದ ಜತೆ ಪ್ರತಿಪಕ್ಷಗಳು ಕೈಜೋಡಿಸಿ, ಪರಿಸ್ಥಿತಿ ನಿಭಾಯಿಸುವುದು ಹೇಗೆ ಎನ್ನುವುದರ ಬಗ್ಗೆ ಯೋಚನೆ ನಡೆಸಬೇಕಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಇದು ಕುಸಿತವಲ್ಲ, ಒಡೆತ ಎಂದು ಟ್ವೀಟ್ ಮಾಡಿದ್ದರು. ಅವರು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶವೇ ಮಾಡಿಲ್ಲ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ಸೆ.5ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟಿÉ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೂಪಾಯಿ ಕುರಿತು ಪರಾಮರ್ಶೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಜೇಟಿÉ ರೂಪಾಯಿ ಮೌಲ್ಯ ಕುಸಿತದ ಹಿಂದೆ ದೇಶೀಯ ಅರ್ಥ ವ್ಯವಸ್ಥೆಯ ಸಮಸ್ಯೆಯ ಬದಲಾಗಿ ಬಾಹ್ಯ ಒತ್ತಡಗಳೇ ಕಾರಣ ಎಂದು ಹೇಳಿದ್ದರು. ಅಲ್ಲದೇ ಅಮೆರಿಕವು ಚೀನಾ, ರಷ್ಯಾ ಮತ್ತು ಇರಾನ್ ಜತೆಗೆ ಸೃಷ್ಟಿಸಿಕೊಂಡಿರುವ ಸಂಘರ್ಷಮಯ ವಾತಾವರಣದಿಂದಾಗಿ ಈ ರೀತಿಯ ಬೆಳವಣಿಗೆ ಉಂಟಾಗಿದೆ ಎಂದಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಒಪ್ಪಂದದಿಂದ ಹೊರಬರುವ ಘೋಷಣೆ ಮಾಡಿದ ದಿನದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಚಿಮ್ಮಲಾರಂಭಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ವಿದೇಶದಿಂದ ಅನಗತ್ಯ ಆಮದಾಗುವ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಿದೆ. ಜತೆಗೆ ಮೂಲ ಸೌಕರ್ಯ ಯೋಜನೆಗಳಿಗೆ ನೀಡಲಾಗಿರುವ ಸಾಲಗಳ ಕುರಿತೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದರು. ಇದರ ಜತೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಡಾಲರ್‌ನಲ್ಲಿ ಪಾವತಿ ಮಾಡುವ ಅವಕಾಶವನ್ನು ಆರ್‌ಬಿಐ ಒದಗಿಸಿಕೊಟ್ಟಿದೆ. ಹೀಗಾಗಿ ಸರ್ಕಾರ ಪರಿಸ್ಥಿತಿಯನ್ನು ನೋಡಿಯೂ ಸುಮ್ಮನಿದೆ ಎನ್ನುವ ವಾದಗಳು ಸರಿಯಲ್ಲ. ಏಕೆಂದರೆ ಈಗ ಅರ್ಥ ವ್ಯವಸ್ಥೆ ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿತಿಯನ್ನು ಅವಲಂಬಿಸಿದೆ ಎಂಬುದು ಹಗಲಿನಷ್ಟೇ ಸತ್ಯ. ಸರ್ಕಾರವನ್ನು ಪ್ರಶ್ನಿಸುವವರು ಈ ವಿಚಾರವನ್ನು ಗಮನಿಸಬೇಕು. ಡಾಲರ್ ಎದುರು ರೂಪಾಯಿ ಕುಸಿತ ತಡೆಗಟ್ಟಲು, ವಿದೇಶಗಳಿಂದ ಅನಗತ್ಯವಾಗಿ ಉತ್ಪನ್ನಗಳ ಆಮದು ಪ್ರಮಾಣ ತಡೆಯಬೇಕು. ಸೆ.5ರಂದು ಇಂಥ ಕ್ರಮ ಘೋಷಣೆ ಮಾಡಲಾಗಿದ್ದರೂ, ಅದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕು. ರೂಪಾಯಿ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆಸಲು ಕೇಂದ್ರ ಸರ್ಕಾರ ಉತ್ತೇಜನ ಕೊಡಬೇಕು.
ಆದರೆ ಪ್ರಾಯೋಗಿಕವಾಗಿ ಅದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಅಮೆರಿಕದ ಡಾಲರ್ ವಹಿವಾಟಿನ ಕರೆನ್ಸಿಯಾಗಿದೆ. ಅಲ್ಲದೇ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ. ಆರ್‌ಬಿಐ ಗವರ್ನರ್ ಡಾ.ಊರ್ಜಿತ್ ಪಟೇಲ್ ತ್ತೈಮಾಸಿಕ ಸಾಲ ನೀತಿ ಪರಿಶೀಲನೆ ಬಳಿಕ ಮಾತನಾಡಿ “ಭಾರತದ ಅರ್ಥ ವ್ಯವಸ್ಥೆಗೆ ಸಮನಾಗಿರುವ ಇತರೆ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ನಮ್ಮ ರೂಪಾಯಿ ಸ್ಥಿತಿ ಉತ್ತಮವಾಗಿದೆ’ ಎಂದು ಹೇಳಿದ್ದಾರೆ. ಇದೊಂದು ಚೇತೋಹಾರಿ ಔಷಧವಾಗಿ ಪರಿವರ್ತನೆಗೊಂಡರೂ ಅಚ್ಚರಿಯೇನಲ್ಲ.
ಇನ್ನೊಂದು ಪ್ರಮುಖ ವಿಚಾರವೊಂದಿದೆ. ಅಮೆರಿಕ ಚೀನಾ, ರಷ್ಯಾ ಜತೆಗೆ ನಡೆಸುತ್ತಿರುವ ಸುಂಕ ಸಮರ ನಿಲ್ಲುವುದೂ ಮುಖ್ಯವಾಗುತ್ತದೆ. ಈ ಬೆಳವಣಿಗೆಯ ಮೇಲೆ ಕೇಂದ್ರ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇರಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಹಾಲಿ ಸರ್ಕಾರ ಬಂದ ಮೇಲೆ ದೇಶದ ಅರ್ಥ ವ್ಯವಸ್ಥೆ ಬಲವೃದ್ಧಿಗೆ ಹಲವು ಕ್ರಮ ಜಾರಿಯಲ್ಲಿದೆ. ಅದಕ್ಕಾಗಿ ಎಲ್ಲರೂ ಬೆಂಬಲ ನೀಡಬೇಕೇ ಹೊರತು, ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಪ್ರಶ್ನಾರ್ಹ.