ಮುಂಬಯಿ : ಡಾಲರ್ ಎದುರು ರೂಪಾಯಿ ವಿನಿಮಯ ದರ ಜೀವಮಾನದ ಕನಿಷ್ಠ ಮಟ್ಟವಾಗಿ 69.10 ರೂ.ಗೆ ಇಳಿದಿರುವ ಕಳವಳಕಾರಿ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 90 ಅಂಕಗಳ ಕುಸಿತಕ್ಕೆ ಗುರಿಯಾಯಿತು. ಕಚ್ಚಾ ತೈಲ ಧಾರಣೆ ಕೂಡ ದೃಢತೆಯನ್ನು ಕಂಡಿರುವುದು ಶೇರು ಪೇಟೆಯ ಕುಸಿತಕ್ಕೆ ಕಾರಣವಾಗಿದೆ.
ಡಾಲರ್ ಎದುರು ರೂಪಾಯಿ ಇಂದು 28 ಪೈಸೆಯಷ್ಟು ಕುಸಿದು 69.10 ರೂ.ಗಳ ಜೀವಮಾನದ ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ದೇಶದಲ್ಲಿ ಹಣದುಬ್ಬರ ಜಾಸ್ತಿಯಾಗುವ ಮತ್ತು ವಿತ್ತೀಯ ಕೊರತೆ ಹೆಚ್ಚುವ ತೀವ್ರ ಭಯವಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಬಂಡವಾಳದ ಹೊರ ಹರಿವು ನಿರಂತರವಾಗಿ ಹೆಚ್ಚುತ್ತಲೇ ಇದೆ.
ಜೂನ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ತಿಂಗಳ ಕೊನೇ ಗುರುವಾರದ ದಿನವಾಗಿರುವ ಇಂದು ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವುದು ಕೂಡ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಗಿದೆ.
ನಿನ್ನೆ ಕೊನೇ ಕ್ಷಣದ ನಡೆದ ಲಾಭನಗದೀಕರಣದ ಶೇರು ಮಾರಾಟದಿಂದಾಗಿ 272.93 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಗುರುವಾರ ಬೆಳಗ್ಗೆ 10.35ರ ಹೊತ್ತಿಗೆ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಂಡು, 4.41 ಅಂಕಗಳ ನಷ್ಟದಲ್ಲಿ 35,212.70 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.50 ಅಂಕಗಳ ನಷ್ಟದೊಂದಿಗೆ 10,656.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಎಚ್ ಡಿ ಎಫ್ ಸಿ ಬ್ಯಾಂಕ್, ಟಿಸಿಎಸ್, ರಿಲಯನ್ಸ್, ಇನ್‌ಫೋಸಿಸ್, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದು ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಮಹೀಂದ್ರ, ಇನ್‌ಫೋಸಿಸ್, ವೇದಾಂತ, ಐಡಿಯಾಸೆಲ್ಯುಲರ್ ಮತ್ತು ಟಾಟಾ ಸ್ಟೀಲ್ ಕಾಣಿಸಿಕೊಂಡರೆ, ಟಾಪ್ ಲೂಸರ್‌ಗಳಾಗಿ ಎಚ್‌ಪಿಸಿಎಲ್, ಗೇಲ್, ಟೈಟಾನ್ ಕಂಪೆನಿ, ಬಿಪಿಸಿಎಲ್, ಟೆಕ್ ಮಹೀಂದ್ರ ಶೇರುಗಳು ಕಾಣಿಸಿಕೊಂಡವು.