ಡಾ.ರಾಜಕುಮಾರ್ ಹಾಗೂ ಪುನೀತ್ ಅವರ ಮುಖಪುಟದ “ರೂಪತಾರಾ’ ಹಾಗೂ ಅದರಲ್ಲಿನ ಡಾ.ರಾಜ್ ಅವರ ಕಾದಂಬರಿಯಾಧಾರಿತ ಲೇಖನ ನೋಡಿ ಪುನೀತ್ ಖುಷಿಪಟ್ಟರು.
“ಇಷ್ಟೊಂದು ಕಾದಂಬರಿಯಾಧರಿತ ಚಿತ್ರಗಳನ್ನು ಮಾಡಿದ್ದಾರಾ …’ ಪುನೀತ್ ಒಂದು ಕ್ಷಣ ಆಶ್ಚರ್ಯಚಕಿತರಾದರು. ಪುಟ ತಿರುವಿ ಹಾಕುತ್ತಾ ಹೋದಂತೆ ಅವರ ಕುತೂಹಲ ಹೆಚ್ಚುತ್ತಾ ಹೋಯಿತು. ಸಿಕ್ಕ ಅಲ್ಪ ಸಮಯದಲ್ಲೇ ಎಲ್ಲವನ್ನು ಖುಷಿಯಿಂದಲೇ ನೋಡಿಕೊಂಡು ಹೋದರು ಪುನೀತ್.
ಪುನೀತ್ ಅವರ ಆಶ್ಚರ್ಯ ಹಾಗೂ ಖುಷಿಗೆ ಕಾರಣ “ರೂಪತಾರಾ’. ಡಾ.ರಾಜಕುಮಾರ್ ಹಾಗೂ ಪುನೀತ್‌ರಾಜಕುಮಾರ್ ಅವರ ಮುಖಪುಟದೊಂದಿಗೆ ಬಂದ ಏಪ್ರಿಲ್ ತಿಂಗಳ “ರೂಪತಾರಾ’ ಹಾಗೂ ಅದರಲ್ಲಿನ ಡಾ.ರಾಜ್‌ಕುಮಾರ ಅವರ ಕಾದಂಬರಿಯಾಧಾರಿತ ಚಿತ್ರಗಳ ಕುರಿತಾದ ಲೇಖನ ನೋಡಿ ಪುನೀತ್ ಖುಷಿಪಟ್ಟರು.
ರಾಜ್‌ಕುಮಾರ್ ನಟಿಸಿದ ಕಾದಂಬರಿಯಾಧಾರಿತ 29 ಚಿತ್ರಗಳ ವಿಸ್ತ್ರತ ಮಾಹಿತಿಯನ್ನು “ರಾಜ್ ಚಿತ್ರಾಂಬರಿ’ ಎಂಬ ಶೀರ್ಷಿಕೆಯಡಿ ಏಪ್ರಿಲ್ ತಿಂಗಳ “ರೂಪತಾರಾ’ದಲ್ಲಿ ನೀಡಲಾಗಿದೆ. ಜಗತ್ತಿನ ಯಾವ ಚಿತ್ರರಂಗದಲ್ಲೂ ಯಾವೊಬ್ಬ ನಟ ಕೂಡಾ ಇಷ್ಟೊಂದು ಕಾದಂಬರಿಯಾಧಾರಿತ ಚಿತ್ರಗಳಲ್ಲಿ ನಟಿಸಿಲ್ಲ.
ಆ ತರಹದ ಒಂದು ಅಪರೂಪದ ಸಾಧನೆ ಡಾ ರಾಜಕುಮಾರ್ ಅವರ ಹೆಸರಿನಲ್ಲಿದೆ. ಇದು ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ವಿಶ್ವಚಿತ್ರರಂಗದಲ್ಲೇ ಒಂದು ಅಪರೂಪದ ದಾಖಲೆ. ಈ ಬಗ್ಗೆ ಏಪ್ರಿಲ್ ತಿಂಗಳ “ರೂಪತಾರಾ’ದಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ.
ಈ 29 ಚಿತ್ರಗಳ ಮಾಹಿತಿಯನ್ನು ಪುಟ ತಿರುವಿಕೊಳ್ಳುತ್ತಲೇ ಗಮನಿಸಿದ ಪುನೀತ್ “ರೂಪತಾರಾ’ ಮಾಹಿತಿ ಕಲೆಹಾಕಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಅಪ್ಪಾಜಿ ಸಾಕಷ್ಟು ಕಾದಂಬರಿಯಾಧಾರಿತ ಸಿನಿಮಾಗಳಲ್ಲಿ ನಟಿಸಿದ್ದು ಗೊತ್ತು. ಈಗ ಅದರ ಸಮಗ್ರ ವರದಿ “ರೂಪತಾರಾ’ದಲ್ಲಿದೆ. ಖಂಡಿತಾ ಓದುತ್ತೇನೆ’ ಎಂದು ಖುಷಿಯಿಂದ ಹೇಳಿದರು ಪುನೀತ್ ರಾಜಕುಮಾರ್.