Advertisement

ರಾಜ್ಯದಲ್ಲಿ ಸೋಮವಾರದಿಂದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ: ಸಚಿವ ಡಾ.ಕೆ.ಸುಧಾಕರ್

11:36 PM Jan 08, 2021 | Team Udayavani |

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯವು ಸೇರಿದಂತೆ ದೇಶಾದ್ಯಂತ ಎಲ್ಲಾ ನಾಗರಿಕರಿಗೂ ಸಹ ಕೋವಿಡ್-19 ಸೋಂಕಿನಿಂದ ರಕ್ಷಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಯೋಚಿತವಾದ ಕ್ರಮವನ್ನು ತೆಗೆದುಕೊಂಡಿದ್ದು ರಾಜ್ಯದಲ್ಲಿ ಸೋಮವಾರದಿಂದ ಕೋವ್ಯಾಕ್ಸಿನ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಹಾಕುವ ಸಲುವಾಗಿ ಕೈಗೊಂಡಿರುವ ಸಿದ್ದತೆಗಳನ್ನು(ಡ್ರೈರನ್) ಪರಿಶೀಲಿಸಿ ಮಾತನಾಡಿದ ಅವರು ಆರೋಗ್ಯವಂತ ಸಮಾಜ ಮತ್ತು ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ವಿಶೇಷ ಕಾಳಜಿ ವಹಿಸಿದ್ದು ಜೊತೆಗೆ ಸಮಾಜದಲ್ಲಿರುವ ಎಲ್ಲಾ ನಾಗರೀಕರಿಗೂ ಸಹ ಉತ್ತಮ ಆರೋಗ್ಯವನ್ನು ಒದಗಿಸಿವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಅದಕ್ಕಾಗಿ ಮೊದಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ದೇಶ ಮತ್ತು ರಾಜ್ಯದ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಕೇಂದ್ರ ಸರ್ಕಾರದಿಂದ ನಾಳೆ ಅಥವಾ ನಾಳಿದ್ದು 13 ಲಕ್ಷ 90 ಸಾವಿರ ಲಸಿಕೆಗಳು ಬರುತ್ತಿದ್ದು ರಾಜ್ಯದಲ್ಲಿ ಸೋಮವಾರದಿಂದ ಕೋವಿಡ್ ಲಸಿಕೆ ಹಾಕಲು ಎಲ್ಲಾ ಜಿಲ್ಲೆಗಳಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಪ್ರಥಮ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಆರೋಗ್ಯ ಸಿಬ್ಬಂದಿಯವರಿಗೆ ಮೊದಲ ಪ್ರಾಶಸ್ತ್ಯವಾಗಿ ಲಸಿಕೆ ಹಾಕಲಿದ್ದೇವೆ ಈಗಾಗಲೇ 6 ಲಕ್ಷ 30 ಸಾವಿರ ಸಿಬ್ಬಂದಿಯವರು ಈಗಾಗಲೇ ಹೆಸರುಗಳನ್ನು ನೊಂದಣಿ ಮಾಡಿಕೊಂಡಿದ್ದಾರೆ ಯಾರಾದರೂ ಹೆಸರುಗಳು ನಮೂದಿಸಿಕೊಳ್ಳದಿದ್ದರೆ ಅವರೂ ಸಹ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ ವೈದ್ಯಕೀಯ,ದಂತ,ಆಯುಷ್ ಕಾಲೇಜುಗಳಲ್ಲಿ ಭೋದಕ ವರ್ಗದವರು ಸಹ ಹೆಸರುಗಳು ನೊಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದ ಸಚಿವರು ವಿವಿಧ ರೀತಿಯ ಕಾಯಿಲೆಗಳಲ್ಲಿ ಸಿಲುಕಿರುವ ಜನರು ಮತ್ತು 60 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕುವ ಯೋಜನೆಯನ್ನು ಸಹ ರೂಪಿಸಲಾಗಿದೆ ಎಂದ ಸಚಿವರು ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿರುವ ಪೋಲೀಸ್ ಇಲಾಖೆ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್, ಕಂದಾಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಹ ಲಸಿಕೆ ನೀಡಬೇಕೆಂಬ ಕಾರ್ಯಕ್ರಮವನ್ನು ಸಹ ಸಿದ್ದಪಡಿಸಲಾಗಿದ್ದು ಲಸಿಕೆ ಬರುತ್ತಿದ್ದಂತೆ ಅವರಿಗೂ ಸಹ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸುಧ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹಕ್ಕಿಜ್ವರ ಕಾಣಿಸಿಕೊಂಡಿರುವ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಕಟ್ಟೆಚ್ಚರವನ್ನು ವಹಿಸುತ್ತಿದ್ದೇವೆ ಆರೋಗ್ಯ,ಪಶು ಸಂಗೋಪನೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾರ್ಗಸೂಚನೆ ನೀಡಿದ್ದೇವೆ ಅಧಿಕಾರಿಗಳು ಸಹ ಕಟ್ಟಚ್ಚರ ವಹಿಸಿದ್ದು ರಾಜ್ಯದಲ್ಲಿ ಇದುವರೆಗೂ ಸಹ ಎಲ್ಲಿಯೂ ಹಕ್ಕಿ ಜ್ವರದ ಒಂದು ಪ್ರಕರಣವೂ ಸಹ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲವು ಸಹಜವಾಗಿ ಮತ್ತು ಅಸಹಜವಾಗಿ ಮೃತಪಟ್ಟಿರುವ ಪಕ್ಷಿಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದೇವೆ ಆದರೆ ವರದಿಯಲ್ಲಿ ಹಕ್ಕಿಜ್ವರದಿಂದ ಹಕ್ಕಿಗಳು ಮೃತಪಟ್ಟಿಲ್ಲವೆಂದು ವರದಿ ಬಂದಿದೆ ಈ ಮಧ್ಯೆಯೂ ವಿಶೇಷ ನಿಗಾವಹಿಸಿ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಸಚಿವರು ಜಿಲ್ಲೆಯಲ್ಲಿ ಯಾರು ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸುತ್ತಾರೆ ಅವರು ಸರಿಯಾಗಿ ಬೇಯಿಸಿ ಅಂದರೇ ಶೇ.70 ರಿಂದ 80 ಡಿಗ್ರಿಗಿಂತಲೂ ಹೆಚ್ಚಾಗಿ ಬೇಯಿಸಿಕೊಂಡು ತಿನ್ನಬೇಕೆಂದು ಸಲಹೆ ನೀಡಿದ ಸಚಿವರು ಈ ಸಂಬಂಧ ಮಾರ್ಗಸೂಚಿಗಳನ್ನು ಸಹ ನೀಡಿದ್ದೇವೆ ಎಂದರು.

ಜಿಲ್ಲಾಧಿಕಾರಿ ಆರ್. ಲತಾ, ಜಿಪಂ ಸಿಇಓ ಪಿ.ಶಿವಶಂಕರ್,ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ,ಜಿಲ್ಲಾ ಎಸ್ಪಿ ಮಿಥುನ್‍ಕುಮಾರ್, ನಗರಸಭೆಯ ಅಧ್ಯಕ್ಷ ಡಿಎಸ್ ಆನಂದರೆಡ್ಡಿ (ಬಾಬು) ಮತ್ತಿತರರು ಉಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next