ಹುಬ್ಬಳ್ಳಿ: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಶಿಕ್ಷಣ ವರ್ಗಗಳಲ್ಲಿ ಪಾಲ್ಗೊಳ್ಳುವುದರಿಂದ ಅವರು ಮಾನಸಿಕವಾಗಿ ಸದೃಢತೆ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಲಿಲಿತಾ ಸಂಕೇಶ್ವರ ಅಭಿಪ್ರಾಯಪಟ್ಟರು.
ಇಲ್ಲಿನ ಗೋಕುಲ ರಸ್ತೆ ವಾಸವಿ ನಗರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುವಾರದಿಂದ ಆಯೋಜಿಸಿರುವ ಶಿಕ್ಷಾ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವರ್ಗಗಳು ಮಕ್ಕಳಿಗೆ ತುಂಬಾ ಉಪಯೋಗವಾಗುತ್ತವೆ ಎಂದರು.
ಸಮಿತಿಯ ಪ್ರಾಂತ ಕಾರ್ಯವಾಹಿಕಿ ವೇದಾ ಕುಲಕರ್ಣಿ ಮಾತನಾಡಿ, ಸಮಿತಿಯು ಶಿಕ್ಷಣ ವರ್ಗದಲ್ಲಿ ಪ್ರವೇಶ, ಪ್ರಾರಂಭಿಕ, ಪ್ರಬೋಧ, ಪ್ರವೀಣ ಎಂದು ನಾಲ್ಕು ವಿಭಾಗಗಳಲ್ಲಿ ವಿಶೇಷ ಶಿಕ್ಷಣ ಪದ್ಧತಿ ಕಲಿಸುತ್ತದೆ. ವರ್ಗದಲ್ಲಿ ಮಾತೆಯರಿಗಾಗಿ ಮೇ 11ರಿಂದ 15ರ ವರೆಗೆ ಐದು ದಿನಗಳ ಮಾತೃ ಶಿಬಿರ ಆಯೋಜಿಸಲಾಗಿದೆ. ಮೇ 13ರಂದು ಪಥ ಸಂಚಲನ ಹಾಗೂ 15ರಂದು ಸಮಾರೋಪ ಸಮಾರಂಭ ನಡೆಯಲಿದೆ. ಶಿಕ್ಷಣ ವರ್ಗದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 175 ಬಾಲಕಿಯರು ಪಾಲ್ಗೊಂಡಿದ್ದಾರೆ ಎಂದರು.
ನಾಗಪುರದ ಕೇಂದ್ರ ಕಾರ್ಯಾಲಯದ ಪ್ರಮುಖ ಮಾನನೀಯ ಚಿತ್ರಾ ಜೋಶಿ ಬೌದ್ಧಿಕ ನಡೆಸಿ, ಸಮಿತಿಯ ಧ್ಯೇಯೋದ್ದೇಶ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಆರ್‌ಎನ್‌ಎಸ್ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಸುಶೀಲಾ ಕಳ್ಳಿಮನಿ ಮಾತನಾಡಿ, ಶಿಕ್ಷಣ ವರ್ಗದಿಂದ ಮಕ್ಕಳು ತಮ್ಮ ಜೀವನದಲ್ಲಿ ಒಳ್ಳೆಯ ಮಾರ್ಗ ನಿರ್ಮಿಸಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಮುಂಚೂಣಿಯ ಶಿಕ್ಷಣ ಕೊಡುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಹಿಳೆಯರನ್ನು ಸಿದ್ಧಪಡಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಪರಿಣಿತಿ ಹಿರೇಮಠಳನ್ನು ಸನ್ಮಾನಿಸಲಾಯಿತು. ಇವಳು ರಾಷ್ಟ್ರ ಸೇವಿಕಾ ಸಮಿತಿ ಶಿಕ್ಷಿಕಾ ಆಗಿದ್ದಾಳೆ.
ಅರುಣಾ ದೇಶಪಾಂಡೆ ಸ್ವಾಗತಿಸಿದರು. ಜಿಲ್ಲಾ ಕಾರ್ಯವಾಹಿಕಿ ಶಾಂತಾ ವೆರ್ಣೇಕರ ನಿರೂಪಿಸಿದರು. ರಾಜೇಶ್ವರಿ ಹೆಗಡೆ ವಂದಿಸಿದರು.