ಹರಿಹರ: ನ್ಯಾಯದಾನ ಪ್ರಕ್ರಿಯೆಯಲ್ಲಿ ವಿಳಂಬವಾಗಬಾರದೆಂದು ಅಗತ್ಯ ಮೂಲ ಸೌಕರ್ಯ ಹೆಚ್ಚಿಸುತ್ತಿದ್ದು, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ
ವಕೀಲರು ಸೇರಿದಂತೆ ನ್ಯಾಯಾಲಯದ ಎಲ್ಲ ಅಧಿಕಾರಿ-ಸಿಬ್ಬಂದಿ ಪ್ರಯತ್ನಿಸಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ.ಶ್ರೀದೇವಿ
ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿಯೇ ಹರಿಹರ ನ್ಯಾಯಾಲಯದಲ್ಲಿ ಗಣನೀಯ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿರುವುದರಿಂದ ಹೆಚ್ಚುವರಿ
ನ್ಯಾಯಾಲಯ ಆರಂಭಿಸಲಾಗಿದೆ ಎಂದು ಹೇಳಿದರು.
ಕಳೆದ 5, 10 ಹಾಗೂ 12 ವರ್ಷಗಳ ಹಿಂದಿನ ಎಲ್ಲಾ ಪ್ರಕರಣಗಳನ್ನು ಬರುವ ನವೆಂಬರ್ ಒಳಗೆ ವಿಲೆಪಡಿಸಲು ಹೈಕೋರ್ಟ್ ಸೂಚಿಸಿದೆ. ಪಕ್ಷಗಾರರ ಮನವೊಲಿಸಿ ಲೋಕ ಅದಾಲತ್ ಮೂಲಕ ಮೋಟಾರು ವಾಹನ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರು ಪ್ರಯತ್ನಿಸಬೇಕು ಎಂದರು. ಹರಿಹರದ ನ್ಯಾಯಾಲಯ ಸಂಕೀರ್ಣ ಸುವಿಶಾಲ ಪ್ರದೇಶದಲ್ಲಿದ್ದು, ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಇನ್ನೂ ಹೆಚ್ಚಿನ ನ್ಯಾಯಾಲಯ ಸ್ಥಾಪಿಸಲು ಇಲ್ಲಿ ಅವಕಾಶವಿದೆ. ನೂತನ ನ್ಯಾಯಾಲಯ 2014 ಮತ್ತು 2017ರ ಎಲ್ಲಾ ಸಿವಿಲ್ ಪ್ರಕರಣ ಹಾಗೂ ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಲಿದೆ ಎಂದರು. ಹಿರಿಯ ವಕೀಲರಾದ ಎ. ವಾಮನಮೂರ್ತಿ ಮಾತನಾಡಿ, ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾತ್ರವಲ್ಲದೆ ಇಲಿಗೆ ಹೆಚ್ಚುವರಿ ನ್ಯಾಯಾಲಯಗಳನ್ನು ತರುವಲ್ಲಿ ಜಿಲ್ಲಾ ನ್ಯಾಯಾಧಿಧೀಶರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಹಿರಿಯ ವಕೀಲ ಬಿ.ಹಾಲಪ್ಪ ಮಾತನಾಡಿ, ಇಂದಿನ ವೇಗದ ತಾಂತ್ರಿಕ ಯುಗದಲ್ಲಿ ನ್ಯಾಯ ನೀಡಿಕೆಯೂ ವೇಗಗತಿ ಪಡೆದುಕೊಳ್ಳುವುದು ಅನಿವಾರ್ಯ. ವಕೀಲರು ಸೇರಿದಂತೆ ಎಲ್ಲರೂ ಶ್ರಮವಹಿಸಿ ಕಕ್ಷಿದಾರರಿಗೆ ಶೀಘ್ರ ನ್ಯಾಯ ಕೊಡಿಸಲು ಪ್ರಯತ್ನಿಸಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಬಸವರಾಜ ಓಂಧಿಕಾರಿ ಮಾತನಾಡಿ, 2ನೇ ಹೆಚ್ಚುವರಿ ನ್ಯಾಯಾಲಯ ನಮಗೆ ಬೇಡದ ಕೂಸಾಗಿದೆ. ವಾಸ್ತವದಲ್ಲಿ ಹೊನ್ನಾಳಿ, ಹರಪನಹಳ್ಳಿ ತಾಲೂಕು ಒಳಗೊಂಡಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಹರಿಹರದಲ್ಲಿ ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಈ ದಿಸೆಯಲ್ಲೇ ಸಂಘದಿಂದ ಹೋರಾಟ ನಡೆಸಿದ್ದು, ಇನ್ನೂ ಫಲ ಸಿಕ್ಕಿಲ್ಲ ಎಂದರು.
ನೂತನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ಅವಿನಾಶ ಚಿಂದು ಎಚ್.
ಮಾತನಾಡಿ, ಪ್ರಕರಣಗಳ ಶೀಘ್ರ ವಿಲೆಗೆ ತಾವು ಆದತ್ಯೆ ನೀಡಲಿದ್ದು, ಇದಕ್ಕೆ ವಕೀಲರು, ನ್ಯಾಯಾಲಯದ ಸಿಬ್ಬಂದಿ ಸಹಕರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾ ಧೀಶೆ ಈ.ಚಂದ್ರಕಲಾ, ಪ್ರಧಾನ ಸಿವಿಲ್ ನ್ಯಾಯಾಧಿಧೀಶೆ ಸರ್ವಮಂಗಳ ಕೆ.ಎಂ., 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧಿಶೆ ಸುಮಲತಾ ಬೆಣಕಲ್, ಎಪಿಪಿ ಶಂಷೀರ್ ಅಲಿಖಾನ್, ಸಂಘದ ಕಾರ್ಯದರ್ಶಿ ಗಣೇಶ್ ಕೆ.ದುರ್ಗದ, ವಕೀಲರಾದ ಎಚ್.ಎಂ.ಷಡಾಕ್ಷರಯ್ಯ, ಪ್ರಸನ್ನಕುಮಾರ್, ಸಾಕಮ್ಮ, ಜಿ.ಎಚ್.ಭಾಗೀರಥಿ, ಸುಧಾ, ಪುಷ್ಪಾ, ಚೇತನ, ಸಾಹಿರಾಬಾನು, ಜಮುನಾ, ಆನಂದ್‌ಕುಮಾರ್, ರಮೇಶ್
ಜಿ.ಬಿ., ಪಿ.ರುದ್ರಗೌಡ, ಕೆ.ಎಚ್.ಬಸವರಾಜ್, ಬಿ.ನಾಗರಾಜ್, ರಾಜಶೇಖರ್, ಕೆ.ಜಿ.ಎಸ್.ಪಟೇಲ್, ಬಿ.ಮಂಜುನಾಥ್, ಲೋಕೇಶ್ ಎ., ಮಹದೇವಯ್ಯ ಮತ್ತಿತರರಿದ್ದರು.