Advertisement

24/7 ಕಲ್ಯಾಣ ಸಹಾಯವಾಣಿಗೆ ಚಾಲನೆ

12:20 PM Aug 08, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಪರಿಶಿಷ್ಟ ಜಾತಿ, ಪಂಗಡದವರು ತಮ್ಮ ಕುಂದು ಕೊರತೆಗಳನ್ನು ನೇರವಾಗಿ ತಿಳಿಸಲು ಹಾಗೂ ಸಮಾಜ ಕಲ್ಯಾಣ ಇಲಾಖೆ ಕಲ್ಪಿಸುವ ಸೇವೆಗಳಲ್ಲಿನ ಅವ್ಯವಸ್ಥೆ, ಅಕ್ರಮಗಳ ಬಗ್ಗೆ ದೂರು ಸ್ವೀಕಾರಕ್ಕಾಗಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಲ್ಯಾಣ ಕೇಂದ್ರ ಸಹಾಯವಾಣಿ ಆರಂಭವಾಗಿದೆ.

Advertisement

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ 2,500ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳಿದ್ದು, ಇಲ್ಲಿನ ಮೂಲ ಸೌಕರ್ಯದ ಸ್ಥಿತಿಗತಿ ಸೌಲಭ್ಯ, ಸವಲತ್ತು ವಿತರಣೆಯಲ್ಲಿ ಲೋಪಗಳು, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆಯೂ ದೂರುಗಳಿದ್ದರೆ ನೇರವಾಗಿ ಸಹಾಯವಾಣಿಗೆ ತಿಳಿಸಲು ಅವಕಾಶ ಕಲ್ಪಿಸಲಾಗಿದೆ.

ದೂರವಾಣೆ ಕರೆ ಮಾತ್ರವಲ್ಲದೇ ವಾಟ್ಸ್‌ಆ್ಯಪ್‌ ಮೂಲಕವೂ ಅಹವಾಲು ಸಲ್ಲಿಸಲು, ದೂರು, ಮಾಹಿತಿ ನೀಡಲು ಅವಕಾಶವಿದೆ. ದೂರುದಾರರಿಗೆ ಕ್ಷಿಪ್ರ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಅನಾಮಧೇಯ ದೂರುಗಳನ್ನು ದಾಖಲಿಸಿಕೊಂಡು ಪರಿಶೀಲಿಸುವ ವ್ಯವಸ್ಥೆಯನ್ನೂ ಕಲ್ಪಿಸಿದೆ. ನಗರದ ನೃಪತುಂಗ ರಸ್ತೆಯಲ್ಲಿರುವ ಯವನಿಕ ಸಭಾಂಗಣದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಲ್ಯಾಣ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.

ಸಹಾಯವಾಣಿ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆ ಹಾಗೂ ಪರಿಶಿಷ್ಟ ಜಾತಿ, ಪಂಗಡದವರ ಕುಂದು ಕೊರತೆಗಳನ್ನು ಆಲಿಸಿ ಸ್ಪಂದಿಸುವ ಸಲುವಾಗಿ ದೇಶದಲ್ಲೇ ಪ್ರಥಮ ಬಾರಿಗೆ ಸಹಾಯವಾಣಿ ಕೇಂದ್ರ ಆರಂಭವಾಗಿರುವುದು ಶ್ಲಾಘನೀಯ. ಇಲಾಖೆ ವ್ಯಾಪ್ತಿಯಲ್ಲಿ 2,500ಕ್ಕೂ ವಿದ್ಯಾರ್ಥಿ- ವಸತಿ ನಿಲಯಗಳಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿವೆ. ಇದಕ್ಕೆ ಅಂತ್ಯವಾಡಲು ಸಹಾಯವಾಣಿ ಕೇಂದ್ರ ಆರಂಭವಾಗಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಪರಿಶಿಷ್ಟರಿಗೆ ಸರ್ಕಾರಿ ಸೌಲಭ್ಯಗಳನ್ನು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಸಹಾಯವಾಣಿ ಆರಂಭಿಸಲಾಗಿದೆ. ಸಕಾಲದಲ್ಲಿ ಅರ್ಹ ಫ‌ಲಾನುಭವಿಗಳಿಗೆ ಸೂಕ್ತ ಸೌಲಭ್ಯ, ಸವಲತ್ತು ಕಲ್ಪಿಸಲು ಸಹಾಯವಾಣಿ ಶುರುವಾಗಿದೆ ಎಂದು ಹೇಳಿದರು.

Advertisement

ಕಲ್ಯಾಣ ಕೇಂದ್ರದ ಸಹಾಯವಾಣಿ ಸಂಖ್ಯೆ: 080-22634300, ವಾಟ್ಸ್‌ಆ್ಯಪ್‌/ಎಸ್‌ಎಂಎಸ್‌/ಟೆಲಿಗ್ರಾಂ ಆ್ಯಪ್‌: 9901100000

ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ. ಬಾಂಗ್ಲಾದೇಶ ಹಾಗೂ ಆಫ್ರಿಕಾದ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಪತ್ತೆ ಹಚ್ಚಿ ವಾಪಸ್‌ ಕಳುಹಿಸಲಾಗುತ್ತಿದೆ. ವಿದ್ಯಾರ್ಥಿ ಸೋಗಿನಲ್ಲಿ ಬೆಂಗಳೂರಿನ ನೆಲೆಸಿದ್ದ ನೂರಕ್ಕೂ ಹೆಚ್ಚು ಆಫ್ರಿಕನ್ನರನ್ನು ಕಳೆದ ವಾರವಷ್ಟೇ ವಾಪಸ್‌ ಕಳುಹಿಸಲಾಗಿದೆ.
-ಡಾ.ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ

ಮೊದಲ ದಿನ 350 ಕರೆ: ಕಲ್ಯಾಣ ಸಹಾಯವಾಣಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಡಿ 40 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ರಾತ್ರಿಪಾಳಿಯಲ್ಲಿ ಐದು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ. ಸಹಾಯವಾಣಿ ಆರಂಭವಾದ ಮೊದಲ ದಿನವೇ ವಿವಿಧೆಡೆಯಿಂದ 350ಕ್ಕೂ ಹೆಚ್ಚು ಕರೆ ಬಂದಿದೆ. ಮುಖ್ಯವಾಗಿ ವಿದ್ಯಾರ್ಥಿವೇತನ, ಪ್ರೋತ್ಸಾಹ ಧನ, ವಸತಿ ನಿಲಯ ಅರ್ಜಿ, ಹೊಸ ಯೋಜನೆ ಕುರಿತೇ ಹೆಚ್ಚು ಮಂದಿ ಮಾಹಿತಿ ಪಡೆದಿದ್ದಾರೆ ಎಂದು ಕಲ್ಯಾಣ ಕೇಂದ್ರ ಉಸ್ತುವರಿ ಅಧಿಕಾರಿ ಎಂ.ಹೇಮಂತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next