ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ. ಆದರೆ, ಅವರು ಅಧಿಕಾರ ಚಲಾಯಿಸದೆ ತಮ್ಮ ಪತಿಯಂದಿರನ್ನು ಅವಲಂಬಿಸುವ ಮಾರ್ಗ ಮಾತ್ರ ಸರಿಯಲ್ಲ ಎಂದು ಶಾಸಕಿ ಸೌಮ್ಯ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಲೀಲಾದೇವಿ ಆರ್.ಪ್ರಸಾದ್ ಅವರ “ಆಷಾಢದ ನೆನಹಿನಲಿ’, ಹಾಗೂ”ಲೀಲಾಜಾಲ’, ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜಕೀಯ ರಂಗ ಪ್ರವೇಶಿಸುವ ಮಹಿಳಾ ಮಣಿಗಳು ತಮಗೆ ಸಿಕ್ಕ ಅಧಿಕಾರವನ್ನು ತಾವೇ ಚಲಾಯಿಸಬೇಕು ಎಂದರು.
ಈಗಿನ ಪರಿಸ್ಥಿತಿಯಲ್ಲಿ ಪುರುಷ ಪ್ರಧಾನ ಸಮಾಜ ಇರುವುದರಿಂದ ಮಹಿಳೆಯರು ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಮುಂದಿನ ಎರಡು ತಲೆಮಾರುಗಳ ನಂತರ ಮಹಿಳೆಯರೇ ಸ್ವತಂತ್ರವಾಗಿ ಅಧಿಕಾರ ಚಲಾಯಿಸುವ ಮಟ್ಟಿಗೆ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕೃತಿ ಕುರಿತು ಮಾತನಾಡಿದ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್, ಲೇಖಕಿ ಡಾ.ಲೀಲಾದೇವಿ ಆರ್.ಪ್ರಸಾದ್ ಅವರು ಆಷಾಢದ ನೆನಹಿನಲಿ ಕೃತಿಯನ್ನು ಪಠ್ಯಪುಸ್ತಕದಲ್ಲಿ ಅಳವಡಿಕೆ ಮಾಡಬಹುದಾದ ರೀತಿಯಲ್ಲಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾ ಸಿದರು. “ಲೀಲಾಜಾಲ’ ಕೃತಿ ಕುರಿತು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾನ ಸಂಪನ್ನ ಕುಮಾರ್ ಮಾತನಾಡಿದರು.
ಇದೇ ವೇಳೆ ರಂಗ ಸಾಧಕ ಎಂ.ಎನ್.ಸುರೇಶ್, ಚುಟುಕು ಕವಿ ಎಂಜಿಆರ್ ಅರಸ್, ಭರತ ನಾಟ್ಯ ಕಲಾವಿದೆ ನೃಪಾಂಗಿ ಕೇಶವ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಗೌರವ ಅಧ್ಯಕ್ಷ ಎಂ.ತಿಮ್ಮಯ್ಯ, ಗೌರವ ಕಾರ್ಯದರ್ಶಿ ಬಿ.ಶೃಂಗೇಶ್ವರ ಉಪಸ್ಥಿತರಿದ್ದರು.