Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 45.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 43.3 ಓವರ್ ಗಳಲ್ಲಿ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ತಂಡ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
Related Articles
Advertisement
ಆದರೆ ಪಂದ್ಯದ ಬಳಿಕ ಇಂಗ್ಲೆಂಡ್ ನ ಕೆಲ ಆಟಗಾರರು, ಮಾಧ್ಯಮಗಳು ದೀಪ್ತಿ ಶರ್ಮಾ ಮತ್ತು ಭಾರತ ತಂಡದ ವಿರುದ್ಧ ತಿರುಗಿ ಬಿದ್ದಿವೆ. ‘ಮಂಕಡಿಂಗ್’ ಮಾಡಿ ಭಾರತ ಕ್ರೀಡಾ ಸ್ಪೂರ್ತಿ ಮರೆತಿದೆ ಎಂದು ಹಲವರು ಹೇಳಿದ್ದಾರೆ. ಮಂಕಡಿಂಗನ್ನು ‘ನ್ಯಾಯಯುತ ರನೌಟ್’ ಎಂದು ಅದೇ ಇಂಗ್ಲೆಂಡ್ ನ ಎಂಸಿಸಿ ತನ್ನ ನಿಯಮಗಳ ಪುಸ್ತಕಕ್ಕೆ ಸೇರಿಸಿದೆ. ಆದರೆ ಕೆಲವು ಮಾಜಿ ಇಂಗ್ಲಿಷ್ ಕ್ರಿಕೆಟಿಗರು ಮತ್ತು ಮಾಧ್ಯಮಗಳ ರೂಲ್ ಬುಕ್ ನಲ್ಲಿ ಇನ್ನೂ ಇದು ‘ಮಂಕಡಿಂಗ್’ ಆಗಿರುವುದು ಮಾತ್ರ ವಿಪರ್ಯಾಸ.
ಈ ಬಗ್ಗೆ ಟ್ವೀಟ್ ಮಾಡಿರುವ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್, ‘ಮಂಕಡ್ ನ ಚರ್ಚೆಯು ನನಗೆ ನಿಜವಾಗಿಯೂ ಆಸಕ್ತಿದಾಯಕವಾಗಿದೆ. ಎರಡೂ ಕಡೆಯಿಂದ ಹಲವು ಅಭಿಪ್ರಾಯಗಳಿವೆ. ನಾನು ವೈಯಕ್ತಿಕವಾಗಿ ಈ ರೀತಿಯಾಗಿ ಪಂದ್ಯವನ್ನು ಗೆಲ್ಲಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ನಾಯಕಿ ಹರ್ಮನ್ ಅವರು ಬೌಲರ್ ದೀಪ್ತಿ ಬೆಂಬಲಕ್ಕೆ ನಿಂತರು. “ಇದು (ರನೌಟ್) ಆಟದ ಭಾಗವಾಗಿದೆ, ನಾವೇನೋ ಹೊಸದನ್ನು ಮಾಡಿದ್ದೇವೆ ಎಂದು ನನಗನಿಸುವುದಿಲ್ಲ. ಇದು ನಿಮ್ಮ ಅರಿವನ್ನು ತೋರಿಸುತ್ತದೆ, ಬ್ಯಾಟರ್‌ಗಳು ಏನು ಮಾಡುತ್ತಿದ್ದರು?. ನಾನು ನನ್ನ ಆಟಗಾರರಿಗೆ ಬೆಂಬಲ ನೀಡುತ್ತೇನೆ, ಅವಳು ನಿಯಮಗಳ ಹೊರತಾಗಿ ಏನನ್ನೂ ಮಾಡಿಲ್ಲ” ಎಂದರು.
“ವೆಲ್ ಡನ್ ದೀಪ್ತಿ ಶರ್ಮಾ. ನೀವು ಸರಿಯಾಗಿ ಮಾಡಿದ್ದೀರಿ. ಯಾರೂ ನಿಮಗೆ ಬೇರೆ ರೀತಿಯಲ್ಲಿ ಹೇಳಲು ಬರಲು ಬಿಡಬೇಡಿ. ಟೀಮ್ ಇಂಡಿಯಾದ ಇಂಗ್ಲಿಷ್ ನೆಲದಲ್ಲಿ ಕ್ಲೀನ್ ಸ್ವೀಪ್ ನ ರುಚಿ ಸಿಹಿಯಾಗಿದೆ. ಅದ್ಭುತವಾಗಿದೆ” ಎಂದು ಮಾಜಿ ಕ್ರಿಕೆಟರ್, ಕಮೆಂಟೇಟರ್ ಆಕಾಶ್ ಚೋಪ್ರಾ ಹೇಳಿಕೊಂಡಿದ್ದಾರೆ.
ಪಾಕಿಸ್ತಾನಿ ಪತ್ರಕರ್ತ ಮಝೆರ್ ಅರ್ಷದ್ ಅವರು “ಇದು ಕಾನೂನುಬದ್ಧ ಔಟ್. ಇಲ್ಲಿ ಆಟದ ಮನೋಭಾವಕ್ಕೆ ವಿರುದ್ಧವಾದ ಏಕೈಕ ವಿಷಯವೆಂದರೆ ಬ್ಯಾಟರ್ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರುವುದು. ವೆಲ್ ಡನ್ ದೀಪ್ತಿ ಶರ್ಮಾ.” ಎಂದು ಬರೆದುಕೊಂಡಿದ್ದಾರೆ.
ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಅವರು ಇಂಗ್ಲೆಂಡ್ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿದ್ದು, ‘ಬಡಪಾಯಿಯಂತೆ ಸೋತ ಕೆಲವು ಇಂಗ್ಲೀಷ್ ಹುಡುಗರನ್ನು ನೋಡಲು ತಮಾಷೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹೊಸ ಎಂಸಿಸಿ ನಿಯಮಗಳನ್ನು ಪೋಸ್ಟ್ ಮಾಡಿದ್ದಾರೆ.