Advertisement

ಮತದಾರರ ಪಟ್ಟಿ ಪರಿಶೀಲನೆಗೆ ಚಾಲನೆ

12:20 AM Sep 02, 2019 | Team Udayavani |

ಮಂಗಳೂರು: ಮತದಾರರ ಪಟ್ಟಿಯಲ್ಲಿ ದೋಷಗಳಿದ್ದರೆ ಅವುಗಳನ್ನು ಸರಿಪಡಿಸಲು ಪ್ರಸ್ತುತ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಶೀಲನ ಕಾರ್ಯಕ್ರಮ ಉತ್ತಮ ಅವಕಾಶ ಎಂದು ದ.ಕನ್ನಡ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಹೇಳಿದರು.

Advertisement

ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿ.ಪಂ. ಸಹಯೋಗದಲ್ಲಿ ಹಮ್ಮಿಕೊಂಡಿರುವ ಮತ ದಾರರ ಪಟ್ಟಿಯ ಪರಿಶೀಲನ ಕಾರ್ಯ ಕ್ರಮಕ್ಕೆ ಜಿ. ಪಂ. ಸಭಾಂಗಣದಲ್ಲಿ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಚುನಾವಣೆ ಸಂದರ್ಭ ಮತದಾರರ ಪಟ್ಟಿ ಯಲ್ಲಿ ದೋಷ ಇರುವ ಬಗ್ಗೆ ಮತದಾರರಿಂದ ದೂರು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಸೆ.1ರಿಂದ ಅ.15ರ ವರೆಗೆ ಇದು ನಡೆಯಲಿದೆ. ಈ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಸ್ವೀಪ್‌ ಜಿಲ್ಲಾ ರಾಯಭಾರಿ ಕ| ಶರತ್‌ ಭಂಡಾರಿ ಮಾತನಾಡಿ, ಮತದಾರರು ಮತದಾರರ ಪಟ್ಟಿಯ ಪರಿಶೀಲನೆ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಲ್ಲದು. ಪ್ರಸ್ತುತ ಶೇ.65 ಮತದಾನವನ್ನು ಉತ್ತಮ ಮತದಾನ ಎಂದು ವಾಖ್ಯಾನಿಸಲಾಗುತ್ತಿದೆ. ಶೇ.90ರಷ್ಟು ಮತದಾನವಾದರೆ ಅದು ಮಾತ್ರ ಉತ್ತಮ ಎಂದರು. ಮತದಾರರ ಪಟ್ಟಿ ಪರಿಶೀಲನ ಅಭಿಯಾನದ ಸಂದರ್ಭದಲ್ಲಿ ಬಿಎಲ್‌ಒಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಮತದಾರರಿಗೆ ಉತ್ತಮ ಸೇವೆ ನೀಡಲು ಈ ಕಾರ್ಯಕ್ರಮ ನಡೆಯುತ್ತಿದೆ. ಮತದಾರರು ಹೆಸರು ಸೇರಿಸಲು, ತಿದ್ದುಪಡಿಗೆ ಮತ್ತು ತೆಗೆದು ಹಾಕಲು ಉತ್ತಮ ಅವಕಾಶ ಎಂದರು.

ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ ಸ್ವಾಗತಿಸಿದರು. ಸ್ವೀಪ್‌ ನೋಡಲ್‌ ಅಧಿಕಾರಿ ಸುಧಾಕರ್‌ ವಂದಿಸಿದರು. ಉಮೇಶ್‌ ನಿರೂಪಿಸಿದರು.

Advertisement

ಜವಾಬ್ದಾರಿಯಿಂದ ಕೆಲಸ ಮಾಡಿ: ಡಿ.ಸಿ.
ಉಡುಪಿ: ಮತಗಟ್ಟೆ ಅಧಿಕಾರಿಗಳು ಮತಪಟ್ಟಿ ಪರಿಷ್ಕರಣೆ ಮತ್ತು ದೃಢೀಕರಣ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿದಾಗ ಮಾತ್ರ ಲೋಪರಹಿತ ಪಟ್ಟಿ ಸಿದ್ಧಪಡಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ರವಿವಾರ ನಗರಸಭೆಯ ಸಭಾಭವನದಲ್ಲಿ ಆಯೋ ಜಿಸಿದ್ದ ಮತದಾರರ ಪಟ್ಟಿಯ ಪರಿಶೀಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, “ಸಮಗ್ರ ಪಟ್ಟಿ ವಿಶೇಷ ಪರಿಷ್ಕರಣೆ -2020′ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಅತ್ಯಂತ ಮಹತ್ವದ ವಿಷಯ. ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. ಪ್ರತಿ ಬಾರಿ ಪಟ್ಟಿಯಲ್ಲಿನ ಲೋಪದೋಷಗಳಿಂದ ಅರ್ಹ ಮತದಾರರು ಮತದಾನದಿಂದ ವಂಚಿತರಾಗುತ್ತಿದ್ದಾರೆ. ಮುಂದೆ ಹೀಗಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

2020ರ ಜನವರಿಗೆ 18 ವರ್ಷ ತುಂಬುವ ಎಲ್ಲರೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಹುದು. ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋದವರು, ವಿಳಾಸ ಬದಲಾದವರು ಸರಿಪಡಿಸಿಕೊಳ್ಳಬಹುದು. ಸೆ. 1ರಿಂದ 2020ರ ಜ. 8ರ ವರೆಗೆ ನೋಂದಣಿ ನಡೆಯಲಿದೆ. 1-1-2020ರಿಂದ 15-01-2020ರ ವರೆಗೆ ಅಂತಿಮ ಪರಿಷ್ಕರಣೆ ಮಾಡಲಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next