Advertisement

ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ

12:44 AM Oct 13, 2019 | Team Udayavani |

ಮಂಗಳೂರು: ಕರ್ನಾಟಕ ಅಂಚೆ ವೃತ್ತದ ವತಿಯಿಂದ ನಗರದ ಎಂ.ಜಿ. ರಸ್ತೆಯ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಆಯೋಜನೆಗೊಂಡಿರುವ ರಾಜ್ಯ ಮಟ್ಟದ 12ನೇ ಅಂಚೆಚೀಟಿಗಳ ಪ್ರದರ್ಶನ “ಕರ್ನಾಪೆಕ್ಸ್‌-2019’ಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಮಾಜಿ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿ, ಅಂಚೆ ಇಲಾಖೆಯ ಇತಿಹಾಸದಲ್ಲಿ ಇದೊಂದು ಉತ್ತಮ ಕಾರ್ಯಕ್ರಮ. ರಾಷ್ಟ್ರಮಟ್ಟದಲ್ಲಿ ಹೆಸರಾದ ದಿ| ಜಾರ್ಜ್‌ ಫೆರ್ನಾಂಡಿಸ್‌, ಅನಂತ್‌ ಪೈ ಮತ್ತು ಗಿರೀಶ್‌ ಕಾರ್ನಾಡ್‌ ಅವರಿಗೆ ಗೌರವ ಸೂಚಿಸಿ ಅಂಚೆ ಇಲಾಖೆಯು ಅಂಚೆ ಲಕೋಟೆ ಬಿಡುಗಡೆ ಮಾಡಿರುವುದು ಉತ್ತಮ ಕಾರ್ಯ ಎಂದರು.

ಜಾರ್ಜ್‌ ಫೆರ್ನಾಂಡಿಸ್‌ ಅವರ ಸಹೋದರ, ಮಾಜಿ ಶಾಸಕ ಮೈಕಲ್‌ ಫೆರ್ನಾಂಡಿಸ್‌ ಮಾತನಾಡಿ, ಜಾರ್ಜ್‌ ಅವರು ಆರಂಭಿಕ ಜೀವನದಿಂದಲೂ ಕ್ರಾಂತಿಕಾರಿಯಾಗಿದ್ದರು. ಕೊಂಕಣ ರೈಲ್ವೇ ಬೇಡಿಕೆಯನ್ನು ಕಾರ್ಯ ರೂಪಕ್ಕೆ ತಂದವರು ಅವರು. ಅವರಿಂದು ಜೀವಂತವಾಗಿದ್ದಿದ್ದರೆ ದೇಶದಲ್ಲಿರುವ ಇಂದಿನ ಗೊಂದಲದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದರು ಎಂದರು.

ಭಾರತೀಯ ಅಂಚೆ ಇಲಾಖೆಯ ಹೆಚ್ಚುವರಿ ಡೈರೆಕ್ಟರ್‌ ಜನರಲ್‌ ವಿಶ್ವ ಪವನ್‌ ಪತಿ ಮಾತನಾಡಿ, ಅಂಚೆ ಚೀಟಿ, ಪತ್ರ ವ್ಯವಹಾರಗಳಿಂದ ಇಂದು ಸಮಾಜ ದೂರವಾಗುತ್ತಿದ್ದು, ಅಂಚೆ ಚೀಟಿಗಳ ಮಹತ್ವವನ್ನು ಉಳಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಗಾಂಧೀಜಿ ಸೇರಿದಂತೆ ಮಹಾನ್‌ ನಾಯಕರು, ದೇಶದ ಸಂಸ್ಕೃತಿ, ವಿಭಿನ್ನತೆ, ವೈಶಿಷ್ಟ ಸಾರುವ ಅಂಚೆ ಚೀಟಿಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ ಎಂದರು.

ವಿಶೇಷ ಅಂಚೆಕಾರ್ಡ್‌, ಲಕೋಟೆ ಬಿಡುಗಡೆ
ಜಾರ್ಜ್‌ ಫೆರ್ನಾಂಡಿಸ್‌, ಅನಂತ್‌ ಪೈ (ಅಮರ ಚಿತ್ರ ಕಥಾ ಖ್ಯಾತಿಯ ಅಂಕಲ್‌ ಪೈ) ಮತ್ತು ಗಿರೀಶ್‌ ಕಾರ್ನಾಡ್‌ ಅವರ ನೆನಪಿನ ವಿಶೇಷ ಅಂಚೆ ಲಕೋಟೆಯನ್ನು ವಿಶ್ವ ಪವನ್‌ ಪತಿ ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಾರಂಪರಿಕ ಸ್ಥಳಗಳ ಚಿತ್ರಗಳುಳ್ಳ ಅಂಚೆ ಕಾರ್ಡನ್ನು ನ್ಯಾ| ಸಂತೋಷ್‌ ಹೆಗ್ಡೆ ಅನಾವರಣಗೊಳಿಸಿದರು. ಅಮರ ಚಿತ್ರಕಥಾ ಪ್ರೈ. ಲಿ.ಯ ಕಲಾ ನಿರ್ದೇಶಕ ಸಾವಿಯೊ ಮಸ್ಕರೇನ್ಹಸ್‌ ಉಪಸ್ಥಿತರಿದ್ದರು.

Advertisement

ಅಂಚೆ ಇಲಾಖೆ ಕರ್ನಾಟಕ ವಲಯ ಮುಖ್ಯಸ್ಥ ಡಾ| ಚಾರ್ಲ್ಸ್‌ ಲೋಬೊ ಸ್ವಾಗತಿಸಿದರು. ದಕ್ಷಿಣ ವಲಯದ ಪಿಎಂಜಿ ಎಸ್‌. ರಾಜೇಂದ್ರ ಕುಮಾರ್‌ ವಂದಿಸಿದರು. ಸುಮಾರು 250ಕ್ಕೂ ಹೆಚ್ಚಿನ ಮಂದಿ ಅಂಚೆ ಚೀಟಿ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next