Advertisement

‘ಭಾರತ್‌ ಕೆ ಮನ್‌ ಕೀ ಬಾತ್‌, ಮೋದಿ ಕೆ ಸಾಥ್‌’ಗೆ ಚಾಲನೆ

01:49 AM Feb 06, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣಾ ಪ್ರಣಾಳಿಕೆಗೆ ಜನಾಭಿಪ್ರಾಯ ಸಂಗ್ರಹಕ್ಕೆ ಬಿಜೆಪಿ ರೂಪಿಸಿರುವ ‘ಭಾರತ್‌ ಕೆ ಮನ್‌ ಕೀ ಬಾತ್‌, ಮೋದಿ ಕೆ ಸಾಥ್‌’ ಕಾರ್ಯಕ್ರಮದಡಿ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Advertisement

ರಾಜ್ಯ ಬಿಜೆಪಿ ಕಚೇರಿ ಎದುರು ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶಾದ್ಯಂತ 10 ಕೋಟಿ ಜನರ ಅಭಿಪ್ರಾಯ, ಸಲಹೆ ಪಡೆದು ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಅಪೇಕ್ಷೆ. ಅದರಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 14 ವಾಹನಗಳು ಸಂಚರಿಸಿ ಸಲಹೆ, ಅಭಿಪ್ರಾಯ ಸಂಗ್ರಹಿಸಲಿವೆ ಎಂದು ಹೇಳಿದರು.

ಪ್ರತಿ ಎರಡು ಲೋಕಸಭಾ ಕ್ಷೇತ್ರದಲ್ಲಿ ಒಂದು ವಾಹನ ಸಂಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿನೂತನ ಯೋಜನೆಗಳನ್ನು ಜನರಿಗೆ ತಿಳಿಸುವುದರ ಜತೆಗೆ ಪ್ರಣಾಳಿಕೆಗೆ ಸಲಹೆ, ಅಭಿಪ್ರಾಯಗಳನ್ನು ಸ್ವೀಕರಿಸಲಿದೆ. ದೇಶದ ಇತಿಹಾಸದಲ್ಲೇ ಯಾವ ರಾಜಕೀಯ ಪಕ್ಷವೂ ಈ ರೀತಿಯ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮ ರೂಪಿಸಿಲ್ಲ ಎಂದು ಹೇಳಿದರು.

ದೇಶದಲ್ಲಿ ಮೋದಿಯವರ ಗಾಳಿ ಬೀಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 280ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದನ್ನು ತಡೆಯುವ ಯಾವುದೇ ಶಕ್ತಿ ಇಲ್ಲ. ಹಾಗಾಗಿ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುವುದು ಸೂರ್ಯ, ಚಂದ್ರರಿರುವಷ್ಟೇ ಸತ್ಯ. ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ಪ್ರತಿ ಮನೆ, ಮನೆಗೆ ಮಾಹಿತಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಕರ್ನಾಟಕದಲ್ಲಿ 22 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ವಿಧಾನಸಭೆಯಲ್ಲಿ 104 ಸದಸ್ಯ ಬಲವಿದ್ದು, ಪ್ರತಿಪಕ್ಷದಲ್ಲಿದ್ದುಕೊಂಡು ನಮ್ಮ ಕೆಲಸ ಮಾಡೋಣ. ಕಾಂಗ್ರೆಸ್‌- ಜೆಡಿಎಸ್‌ನವರು ಪರಸ್ಪರ ಬಡಿದಾಡಿಕೊಂಡು ಅಧಿಕಾರ ಕಳೆದುಕೊಂಡಾಗ ಸಹಜವಾಗಿಯೇ ರಾಜಕೀಯ ಪಕ್ಷವಾಗಿ ನಮ್ಮ ಕಾರ್ಯ ಮಾಡಬೇಕು. ಅಲ್ಲಿಯವರೆಗೆ ಯಾವುದೇ ಹೇಳಿಕೆ ನೀಡದೆ ಕೆಲಸ ಮಾಡೋಣ. ಬರವಿದ್ದರೂ ಸಚಿವರು, ಶಾಸಕರು ಜನರಿಗೆ ಸ್ಪಂದಿಸಿ ಪರಿಸ್ಥಿತಿಯ ನಿರ್ವಹಣೆಗೆ ಗಮನ ನೀಡುತ್ತಿಲ್ಲ. ಈ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ವಿರೋಧ ಪಕ್ಷದಲ್ಲಿ ನಮ್ಮ ಜವಾಬ್ದಾರಿ ನಿರ್ವಹಿಸಿದರೆ ಅಧಿಕಾರ ಕಳೆದುಕೊಂಡು ಅವರೇ ಮನೆಗೆ ಹೋಗುತ್ತಾರೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿಗಳಾದ ಆರ್‌.ಅಶೋಕ್‌, ಕೆ.ಎಸ್‌.ಈಶ್ವರಪ್ಪ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next