ಉಡುಪಿ: ಮನೆಗಳ ಕಪಾಟಿನಲ್ಲಿ ಧೂಳು ಹಿಡಿಯುವ ಪುಸ್ತಕಗಳನ್ನು ಆಸಕ್ತರಿಗೆ ಓದಲು ತಲುಪಿಸುವ ಯೋಜನೆಯನ್ನು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಶುಕ್ರವಾರ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚಾಲನೆ ನೀಡಲಾಯಿತು.
ಯೋಜನೆಯನ್ನು ಉದ್ಘಾಟಿಸಿದ ಸಾಹಿತಿ, ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ| ಉಪೇಂದ್ರ ಸೋಮಯಾಜಿ ಅವರು, ಶ್ರೇಷ್ಠ ಪುಸ್ತಕಗಳ ಓದು ವ್ಯಕ್ತಿತ್ವವನ್ನು ವಿಕಾಸವಾಗುವಂತೆ ಮಾಡುತ್ತದೆ. ಆದರೆ ಈಗ ಓದಿನ ಹವ್ಯಾಸ ಕಡಿಮೆಯಾಗುತ್ತಿದೆ. ಸಿಡಿ ಮೂಲಕ ಸಾಹಿತ್ಯಗಳನ್ನು ಪ್ರಚುರಪಡಿಸುವುದು ಉತ್ತಮ ಮಾರ್ಗ ಎಂದರು.
ಪ್ರೊ| ಸೋಮಯಾಜಿಯವರು ವೇದಿಕೆ ಯಲ್ಲಿರಿಸಿದ ತೊಟ್ಟಿಲಿನಲ್ಲಿ ಪುಸ್ತಕಗಳನ್ನು ಹಾಕಿ ಉದ್ಘಾಟಿಸಿದ ಬಳಿಕ ಪುಸ್ತಕಗಳನ್ನು ತಂದವರು ತೊಟ್ಟಿಲಿಗೆ ಹಾಕಿದರು. ಇದೊಂದು ವಿಶಿಷ್ಟ ಯೋಜನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಪುಸ್ತಕಗಳನ್ನು ಓದಿದ ಬಳಿಕ ಮತ್ತೆ ಇಲ್ಲಿಗೇ ತಂದಿರಿಸಿದರೆ ಇತರರಿಗೆ ಅನುಕೂಲವಾಗುತ್ತದೆ ಎಂದು ಸೋಮಯಾಜಿ ಹೇಳಿದರು.
ಪುಸ್ತಕ ಬಿಡುಗಡೆ
ಪ್ರಾಂಶುಪಾಲೆ, ಸಾಹಿತಿ ಡಾ|ನಿಕೇತನ ಅವರ “ಬೊಗಸೆಯಲಿ ಸಾಗರ’ ಮತ್ತು ಸಚ್ಚಿದಾನಂದ ಹೆಗ್ಡೆ ಅವರ “ತುಳುವರ ನಾಡುನುಡಿ’ ಪುಸ್ತಕಗಳನ್ನು ಸೋಮಯಾಜಿ ಬಿಡುಗಡೆಗೊಳಿಸಿದರು.
ತಾಲೂಕು ಕಸಾಪ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಸ್ವಾಗತಿಸಿ ಪ್ರಸ್ತಾವನೆಗೈದರು. ನಗರಸಭಾ ಸದಸ್ಯರಾದ ಹರೀಶ ಶೆಟ್ಟಿ, ರಶ್ಮಿ ಚಿತ್ತರಂಜನ ಭಟ್, ಲಯನ್ಸ್ ಭವನದ ಅಧ್ಯಕ್ಷ ರಾಜಗೋಪಾಲ್ ಎಸ್. ಶುಭಕೋರಿದರು. ತಾಲೂಕು ಕಸಾಪ ಗೌ. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರ್ವಹಿಸಿದರು. ಗಿರಿಜಾ ಹೆಗ್ಡೆ ಗಾಂವ್ಕರ್ ವಂದಿಸಿದರು. ಕಸಾಪ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ಸೂರಾಲು ನಾರಾಯಣ ಮಡಿ, ಪುಂಡಲೀಕ ಮರಾಠೆ, ಗಣೇಶ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು. ಉದ್ಘಾಟನೆಗೆ ಮುನ್ನ ಸಮ್ಮೇಳನಾಧ್ಯಕ್ಷರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.