ನವದೆಹಲಿ: ಕೋವಿಡ್ ಲಸಿಕೆ ಕುರಿತು ಯಾವುದೇ ರೀತಿಯ ತಪ್ಪು ತಿಳಿವಳಿಕೆ ಬೇಡ. ನಿರೀಕ್ಷೆಯಂತೆ ಭಾರತದಲ್ಲಿಯೂ ಕೋವಿಡ್ ಲಸಿಕೆ ನೀಡಲು ಮುಂದಾಗಿದ್ದು, ಈ ಬಗ್ಗೆ ಪ್ರತಿಯೊಂದು ಹಂತದಲ್ಲೂ ವಿಸ್ತೃತವಾಗಿ ಅಧ್ಯಯನ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಶನಿವಾರ(ಜನವರಿ 02) ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ದೇಶದ ಎಲ್ಲಾ ರಾಜ್ಯಗಳು ಲಸಿಕೆ ವಿತರಣೆಯ ಪ್ರಾತ್ಯಕ್ಷಿಕೆ ನಡೆಸಲು ದೇಶಾದ್ಯಂತ ಡ್ರೈರನ್ ಆರಂಭಿಸಲಾಗಿದೆ. ಇದರಿಂದ ಬೃಹತ್ ಸಂಖ್ಯೆಯಲ್ಲಿ ಹೇಗೆ ಲಸಿಕೆ ನೀಡಬಹುದು ಎಂಬ ಬಗ್ಗೆ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೇ ಲಸಿಕೆ ನೀಡಲು ಬೇಕಾದ ತರಬೇತಿ ನೀಡುವ ಕುರಿತು ಮಾಹಿತಿ ದೊರೆಯಲಿದೆ ಎಂದು ಹೇಳಿದರು.
“ಕೋವಿಡ್ ಲಸಿಕೆಯ ಸುರಕ್ಷತೆ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ಕೋವಿಡ್ ಲಸಿಕೆ ಬಗ್ಗೆ ಎಲ್ಲವನ್ನೂ ಪರಿಶೀಲಿಸಿದ್ದೇವೆ. ಆರಂಭದಲ್ಲಿ ಪೋಲಿಯೊ ಲಸಿಕೆ ನೀಡುವ ಸಂದರ್ಭದಲ್ಲಿಯೂ ಇದೇ ರೀತಿ ಊಹಾಪೋಹ ಹರಿದಾಡಿತ್ತು. ಆದರೆ ಒಂದು ಬಾರಿ ಲಸಿಕೆ ಕೊಡಲು ಆರಂಭಿಸಿದ ಮೇಲೆ ಎಲ್ಲ ಜನರಲ್ಲಿಯೂ ಸುರಕ್ಷತೆಯೂ ಬಗ್ಗೆ ವಿಶ್ವಾಸ ಮೂಡಿಸಲಿದೆ ಎಂದು ದೆಹಲಿಯಲ್ಲಿ ಡ್ರೈರನ್ ಪರಿಶೀಲನೆ ಸಂದರ್ಭದಲ್ಲಿ ಹರ್ಷವರ್ಧನ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಇದನ್ನೂ ಓದಿ:ಪ್ರತಿಯೊಬ್ಬ ಹಿಂದೂ ದೇಶಭಕ್ತನೇ, ಅದು ಹಿಂದೂಗಳ ಮೂಲಗುಣ: ಮೋಹನ್ ಭಾಗವತ್
ಇದು ಪ್ರತಿಯೊಬ್ಬರಿಗೂ ಪರಿಣಾಮಕಾರಿ ಎಂದು ಭರವಸೆ ನೀಡಿರುವ ಡಾ. ಹರ್ಷ್ ವರ್ಧನ್ ಅವರು, ದಶಕಗಳ ಹಿಂದೆ ದೇಶಾದ್ಯಂತ ಪೋಲಿಯೊ ಲಸಿಕೆ ಅಭಿಯಾನ ನಡೆಸಿದಂತೆ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ ಎಂದರು. ಲಸಿಕೆ ನೀಡುವುದೊಂದನ್ನು ಬಿಟ್ಟು ಉಳಿದೆಲ್ಲ ಪ್ರಕ್ರಿಯೆಗಳು ನಡೆಯಲಿದೆ ಎಂದು ಹೇಳಿದರು.