ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.
ವಿಧಾನಸಭೆಗೆ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೊಪ್ಪಳ, ಹಾವೇರಿ, ಧಾರವಾಡ ಜಿಲ್ಲೆಗಳ ಪ್ರವಾಸ ರದ್ದುಗೊಳಿಸಿ ರೇಸ್‌ಕೋರ್ಸ್ ನಿವಾಸದಲ್ಲಿದ್ದರು. ಅಲ್ಲಿಗೆ ಸಚಿವರನ್ನು ಕರೆಸಿಕೊಂಡು ಪಕ್ಷ ತ್ಯಜಿಸದಂತೆ ಕಿವಿ ಮಾತು ಹೇಳಿದರೆಂದು ತಿಳಿದು ಬಂದಿದೆ.
ಈ ಮಧ್ಯೆ ಸಚಿವ ನಾರಾಯಣ ಗೌಡ ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಕಳೆದ ವಾರ ದಟ್ಟವಾಗಿತ್ತು. ಆದರೆ ಪ್ರಧಾನಿ ಮೋದಿ ಅವರ ಮಂಡ್ಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದ ನಾರಾಯಣ ಗೌಡ ಅವರು ಬಳಿಕ ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಪಕ್ಷಾಂತರ ವದಂತಿಗೆ ತೆರೆ ಬಿದ್ದಿದೆ.
ಬಿಜೆಪಿ ಅಧಿಕಾರ ಭದ್ರ: ಬೊಮ್ಮಾಯಿ
ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ನೀಡಿಕೆ ಮತ್ತು ಒಕ್ಕಲಿಗ ಹಾಗೂ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರಕಾರದ ಕ್ರಮಗಳಿಂದ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕ್ ಸಂಪೂರ್ಣವಾಗಿ ಛಿದ್ರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಕಳೆದುಕೊಂಡಿರುವುದರಿಂದ ಹತಾಶವಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್ ಬಳಸುತ್ತಿರುವ ಕೀಳು ಮಟ್ಟದ ಭಾಷೆಯೇ ಅದರ ಹತಾಶೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.