ವಿಜಯಪುರ: ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ದಿನೇ ದಿನ ಹೆಚ್ಚುತ್ತಿದೆ. ಉತ್ತರ ಭಾರತ ಮೂಲದವರು ಹಾಗೂ ಅಪರಿಚಿತರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸುವ, ಹಲ್ಲೆ ಮಾಡುವ ಘಟನೆಗಳು ಮುಂದುವರೆದಿವೆ.
ಮಕ್ಕಳ ಕಳ್ಳನೆಂಬ ಶಂಕೆಯಿಂದ ಓರ್ವ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ, ಥಳಿಸಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ಜರುಗಿದೆ.
ಇಟ್ಟಂಗಿಹಾಳ ಗ್ರಾಮದ ಪೂಜಾರ ವಸ್ತಿ ಬಳಿ ಅಪರಿಚಿತ ಯುವಕ ಓಡಾಡುವುದನ್ನು ಗಮನಿಸಿದ ಸ್ಥಳೀಯರು, ಮಕ್ಕಳ ಕಳ್ಳನೆಂಬ ಶಂಕೆಯಿಂದ ಯುವಕನನ್ನು ಹಿಡಿದು ಥಳಿಸಿದ್ದಾರೆ.
ಎಲ್ಲಿಂದ ಬಂದಿದ್ದೀಯಾ? ಎಷ್ಟು ಜನ ಬಂದಿದ್ದೀರಿ ಎಂದು ವಿಚಾರಿಸಿದ ಗ್ರಾಮಸ್ಥರು ಗ್ರಾಮದ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಶಿರಸಿ ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ರಾತ್ರಿ ಗಸ್ತು!
ಮಕ್ಕಳ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ನಗರದ ಗ್ಯಾಂಗ್ ಬಾವಡಿ ಪ್ರದೇಶದಲ್ಲಿ ಓಡಾಡುತ್ತಿದ್ದ ಉತ್ತರ ಭಾರತ ಮೂಲದ ಇಬ್ಬರು ಬರ್ಕಾಧಾರಿ ಮಹಿಳೆಯರು ಸೇರಿದಂತೆ ನಾಲ್ವರನ್ನು ಸೆರೆ ಹಿಡಿದು, ಥಳಿಸಿದ್ದರು.
ಈ ಘಟನೆ ಹಸಿರಾಗಿರುವಾಗಲೇ ಇದೀಗ ಇಟ್ಟಂಗಿಹಾಳ ವಸ್ತಿಯಲ್ಲಿ ವದಂತಿಯ ಥಳಿತದ ಮತ್ತೊಂದು ಪ್ರಕರಣ ವರದಿಯಾಗಿದೆ.