Advertisement

ಆಲಮಟ್ಟಿ ಅಣೆಕಟ್ಟೆ ಎತ್ತರ ಕಡಿತ ವದಂತಿ; ಆರು ದಶಕಗಳ ಬೇಡಿಕೆ ಕೃಷ್ಣಾರ್ಪಣ

05:47 PM Dec 02, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ)ಯ ಮೂರನೇ ಹಂತ ಜಾರಿ ವೇಳೆ ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಅಡಿ ಬದಲು 522 ಅಡಿಗೆ ಸೀಮಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬುದು ಈಗ ಭಾರಿ ಸಂಚಲನಕ್ಕೆ ಕಾರಣವಾಗಿದೆ.

Advertisement

ಈ ಯೋಜನೆಗಾಗಿ ಐದಾರು ದಶಕಗಳಿಂದ ಹೋರಾಟ ನಡೆದಿತ್ತು. ಮೂರು ರಾಜ್ಯಗಳ ಕೋರ್ಟ್‌ ವ್ಯಾಜ್ಯ ಹೋರಾಟ ಬಳಿಕ ನ್ಯಾ|ಬ್ರಿಜೇಶಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪಿನನ್ವಯ ರಾಜ್ಯಕ್ಕೆ ಸಿಕ್ಕ ಒಟ್ಟು 173 ಟಿಎಂಸಿ ಪೈಕಿ ಯುಕೆಪಿ ಹಂತ-3ಕ್ಕೆ 130 ಟಿಎಂಸಿ ನೀರು ಹಂಚಿಕೆಯಾಗಿತ್ತು.

ಇದರ ಬಳಕೆಗಾಗಿ ಆಲಮಟ್ಟಿ ಜಲಾಶಯದ ಸಂಗ್ರಹಣಾ ಮಟ್ಟ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಲು ನಿರ್ಧರಿಸಲಾಗಿತ್ತು. ಜತೆಗೆ 9 ಉಪಯೋಜನೆಗಳ ಜಾರಿ ಮೂಲಕ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಒಟ್ಟು 5.30 ಲಕ್ಷ ಹೆಕ್ಟೇರ್‌ (13.10 ಲಕ್ಷ ಎಕರೆ) ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಗುರಿ ಹೊಂದಲಾಗಿತ್ತು.

ಇದಕ್ಕಾಗಿ ವಿಜಯಪುರ ಜಿಲ್ಲೆಯ ಎರಡು ಹಾಗೂ ಬಾಗಲಕೋಟೆ ಜಿಲ್ಲೆಯ 20 ಗ್ರಾಮಗಳನ್ನು ಸ್ಥಳಾಂತರಿಸಬೇಕಿತ್ತು. ಹಿನ್ನೀರ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ 96 ಸಾವಿರ ಎಕರೆ ಹೊರತುಪಡಿಸಿ ಕಾಲುವೆ, ಪುನರ್‌ ವಸತಿ ಸಹಿತ ವಿವಿಧ ಉದ್ದೇಶಕ್ಕೆ ಒಟ್ಟು 1.36 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿತ್ತು.

ಸದ್ಯದ ಅಂದಾಜಿನ ಪ್ರಕಾರ ಈ ಯೋಜನೆ ಪೂರ್ಣಗೊಳ್ಳಲು ಒಂದು ಲಕ್ಷ ಕೋಟಿ ಹಣ ಬೇಕಿತ್ತು. ಹೀಗಾಗಿ ಹಣಕಾಸು ಕೊರತೆ ಇಲ್ಲವೇ ಇನ್ಯಾವುದೋ ಕಾರಣಕ್ಕೆ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆ 1976ರಲ್ಲಿ ನ್ಯಾ|ಆರ್‌.ಎಸ್‌.ಬಚಾವತ್‌ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನ ಪ್ರಕಾರ ರಾಜ್ಯಕ್ಕೆ 173 ಟಿಎಂಸಿ ನೀರು ದೊರೆತಿದ್ದು, ಅದರಡಿ ಯುಕೆಪಿ 1-2 ಕೈಗೊಳ್ಳಲಾಗಿತ್ತು. ಅದರಲ್ಲಿ 1.76 ಲಕ್ಷ ಎಕರೆ ಭೂಮಿ ಮುಳುಗಡೆಯಾದರೆ,
1,53,60,000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿತ್ತು. ಆಗ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ವ್ಯಾಪ್ತಿಯಲ್ಲಿ 176 ಗ್ರಾಮ ಮುಳುಗಡೆಯಾಗಿದ್ದವು. 136 ಪುನರ್‌ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

Advertisement

30 -35 ಟಿಎಂಸಿ ಲಭ್ಯ
ಈಗ ಅಣೆಕಟ್ಟೆಯನ್ನು 522 ಮೀಟರ್‌ ಅಷ್ಟೇ ಸೀಮಿತಗೊಳಿಸಿದರೆ 90 ಟಿಎಂಸಿ ಅಡಿಯಷ್ಟು ನೀರು ಕಡಿತಗೊಳ್ಳಲಿದೆ. ಸಿಗುವ ಅಂದಾಜು 30ರಿಂದ 35 ಟಿಎಂಸಿ ಅಡಿ ನೀರಿನಲ್ಲೇ 9 ಉಪ ಯೋಜನೆಗಳಿಗೆ ಪುನರ್‌ ಹಂಚಿಕೆ ಮಾಡುವ ಚಿಂತನೆ ಇದೆ ಎನ್ನಲಾಗಿದೆ.

ಆಲಮಟ್ಟಿ ಡ್ಯಾಂ ನಿರ್ಮಿಸಿ ನೀರು ನಿಲ್ಲಿಸುವಾಗ ಕೇವಲ ಮೂರು ಸಾವಿರ ಎಕರೆ ಭೂಮಿ ಪಡೆಯಲಾಗಿತ್ತು. ಆದರೆ, ಈಗ 30 ಲಕ್ಷ ಎಕರೆ ದಾಟಿದೆ. 524.256 ಮೀಟರ್‌ ಗೆ ಎತ್ತರಿಸುವುದನ್ನು ಮೊದಲೇ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಹಣದ ಕೊರತೆಯಿಂದ ಡ್ಯಾಂ ಅನ್ನು 522 ಮೀಟರ್‌ಗೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿರಬಹುದು. ಒಂದು ವೇಳೆ ಈ ನಿರ್ಧಾರ ಅಂತಿಮಗೊಂಡರೆ ನಮ್ಮ ಭಾಗಕ್ಕೆ ಮಾಡಿದ ದೊಡ್ಡ ದ್ರೋಹ.
ಬಸವರಾಜ ಕುಂಬಾರ,
ಮಾಜಿ ಅಧ್ಯಕ್ಷರು, ಕೃಷ್ಣಾ ಕಾಡಾ, ನಿಡಗುಂದಿ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next