Advertisement

ಪಿಜಿ, ಹೋಂ ಸ್ಟೇ ನಿರ್ವಹಣೆಗೆ ನೀತಿ- ನಿಯಮ ರಚನೆ

09:55 AM Jun 06, 2019 | keerthan |

ಮಂಗಳೂರು: ನಗರ ಪ್ರದೇಶಗಳಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿಜಿ) ಮತ್ತು ಹೋಂ ಸ್ಟೇಗಳಿಗೆ ಸಂಬಂಧಿಸಿ ಹೊಸ ನೀತಿ ರೂಪಿಸಲು ಸರಕಾರ ನಿರ್ಧರಿಸಿದೆ. ಅಧಿಕಾರಿಗಳು, ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ್ದು, ನಿಯಮಾವಳಿ ಕರಡು ಹಂತದಲ್ಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿರುವ ಪಿಜಿಗಳಿಗೆ ಮೂಲ ಸೌಲಭ್ಯ, ಭದ್ರತೆ ಮತ್ತಿತರ ವಿಚಾರಗಳಲ್ಲಿ ಸ್ಪಷ್ಟ ನೀತಿಗಳಿಲ್ಲ. ಇದರಿಂದಾಗಿ ಅಹಿತಕರ ಘಟನೆಗಳಾದಾಗ ಕ್ರಮಕ್ಕೆ ಸಾಧ್ಯವಾಗುತ್ತಿಲ್ಲ. ಈ ದಿಶೆಯಲ್ಲಿ ಸರಕಾರ ಕಾರ್ಯ ಪ್ರವೃತ್ತವಾಗಿದೆ. ನಗರದಲ್ಲಿರುವ ಹೋಂ ಸ್ಟೇಗಳಿಗೂ ನೀತಿ ರೂಪಿಸುವ ಚಿಂತನೆಯಿದೆ ಎಂದರು.

ಆಸ್ತಿ ತೆರಿಗೆ, ಖಾತೆ ಬದಲಾವಣೆಗೆ ಆನ್‌ಲೈನ್‌ ವ್ಯವಸ್ಥೆ
ಮಂಗಳೂರು ಮಹಾನಗರ ಪಾಲಿಕೆಯೂ ಸಹಿತ ರಾಜ್ಯದ ಎಲ್ಲ 10 ಮಹಾನಗರ ಪಾಲಿಕೆಗಳಲ್ಲೂ ಆಸ್ತಿ ತೆರಿಗೆ ಪಾವತಿ ಮತ್ತು ಖಾತಾ ಬದಲಾವಣೆ (ಮ್ಯುಟೇಶನ್‌) ಗೆ ಸಂಬಂಧಿಸಿ ಆನ್‌ಲೈನ್‌ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ಆಸ್ತಿ ತೆರಿಗೆ ಪಾವತಿಗೆ ಅನಗತ್ಯ ಗೊಂದಲ, ದಿನವಿಡೀ ಸಾಲಿನಲ್ಲಿ ಕಾಯುವುದು ಇತ್ಯಾದಿ ಸಮಸ್ಯೆಗಳಿವೆ. ಹಾಗಾಗಿ ಆನ್‌ಲೈನ್‌ ವ್ಯವಸ್ಥೆಗೆ ಮುಂದಾಗಿದ್ದು ಒಪ್ಪಿಗೆ ಸಿಕ್ಕಿದೆ ಎಂದರು.

ರಜೆ ರದ್ದತಿ- ತಪ್ಪು ಕಲ್ಪನೆ
ಗುಡ್‌ ಫ್ರೈಡೇ, ಈದ್‌ ಮಿಲಾದ್‌ ಹಾಗೂ ಮಹಾಲಯ ಅಮಾವಾಸ್ಯೆಯ ರಜೆಗಳನ್ನು ಸರಕಾರ ರದ್ದು ಮಾಡುತ್ತದೆ ಎನ್ನುವ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯವಿದೆ. ಈಗಿರುವ ರಜೆಗಳ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಇದು ವರದಿ ನೀಡಿದೆ ಅಷ್ಟೇ. ಅದರ ಅನುಷ್ಠಾನ ಆಗಿಲ್ಲ. ಈ ಬಗ್ಗೆ ಜನಾಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇಂಗ್ಲಿಷ್‌ ಕಲಿಕೆಗೆ ಪ್ರವೇಶ ಮಿತಿ: ಇಂದು ಸಭೆ
ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರವೇಶ ಪಡೆಯಲು ನಿಗದಿತ 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದಾರೆ. ಹಾಗಾಗಿ ತರಗತಿ ಒಂದಕ್ಕೆ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಎನ್ನುವ ಸರಕಾರದ ನಿಯಮದ ಕುರಿತು ಚರ್ಚಿಸಲು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಇಲಾಖಾಧಿಕಾರಿಗಳ ಹಾಗೂ ಸಚಿವರ ಸಭೆಯನ್ನು ಕರೆದಿದ್ದಾರೆ ಎಂದರು.

Advertisement

ನೀರಿನ ಸಮಸ್ಯೆಯಾದರೆ ಟ್ಯಾಂಕರ್‌ ವ್ಯವಸ್ಥೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ರೇಷನಿಂಗ್‌ ನಿಯಮ ಜಾರಿಗೆ ತಂದಿರುವ ಕಾರಣ ಇದುವರೆಗೆ ನೀರು ಸರಬರಾಜು ಸಾಧ್ಯವಾಗಿದೆ. ಜೂ. 10ರ ತನಕ ಪೂರೈಸಲು ನೀರು ಇದೆ. ಆ ಬಳಿಕ ಸಮಸ್ಯೆಯಾದರೆ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಈಗಾಗಲೇ ವಾರ್ಡ್‌ಗೆ ಒಂದರಂತೆ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಜೂ. 7, 8ರೊಳಗೆ ಮಾನ್ಸೂನ್‌ ಮಳೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆ ಬಳಿಕವೂ ಮಳೆಯಾಗದಿದ್ದರೆ ಪಾಲಿಕೆ ವ್ಯಾಪ್ತಿಯಲ್ಲಿರುವ ಬಾವಿ, ಕೊಳವೆ ಬಾವಿ ಸೇರಿದಂತೆ ಖಾಸಗಿ ನೀರಿನ ಮೂಲಗಳಿಂದ ನೀರನ್ನು ತೆಗೆದು ವಾರ್ಡ್‌ಗೆ ಒಂದರಂತೆ ಟ್ಯಾಂಕರ್‌ನೀರು ವಿತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next