ಬಾಗಲಕೋಟೆ: ಸಂತ್ರಸ್ತರಿಗೆ ಪುನರ್‌ವಸತಿ, ಪುನರ್‌ನಿರ್ಮಾಣ ಕಲ್ಪಿಸುವ ಮಹತ್ವದ ಹೊಣೆಗಾರಿಕೆ ಹೊತ್ತ ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತೂಂದು ಎಡವಟ್ಟು ಮಾಡಿದೆ ಎಂಬ ಪ್ರಬಲ ಆರೋಪ ಕೇಳಿ ಬರುತ್ತಿದೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಹುದ್ದೆಗೆ, ಕಿರಿಯ ಸಹಾಯಕ ಅಭಿಯಂತರರನ್ನು ನೇಮಕ ಮಾಡುವ ಮೂಲಕ ಬಿಟಿಡಿಎ ಅಧಿಕಾರಿಗಳಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿ ಬಂದಿದೆ.
ಹೌದು, ಬಿಟಿಡಿಎ ಉಪ ವಿಭಾಗ ಸಂಖ್ಯೆ-5ರಲ್ಲಿ ಎಇಇ ಆಗಿದ್ದ ತೋಟಗಾಂವ ಎಂಬ ಅಧಿಕಾರಿ, ಮೇ 30ರಂದು ಸೇವೆಯಿಂದ ನಿವೃತ್ತಿಯಾಗಿದ್ದರು. ಆ ಹುದ್ದೆಗೆ ಎಇ (ಸಹಾಯಕ ಅಭಿಯಂತರ) ಕೆಡರ್‌ನ ಹಿರಿಯ ಅಧಿಕಾರಿಗೆ ಪ್ರಭಾರಿ ಕೊಡಬೇಕು ಎಂಬುದು ನಿಯಮ. ಆದರೆ, ಜ್ಯೂನಿಯರ್ ಎಂಜಿನಿಯರ್‌ಗೆ ಆ ಹುದ್ದೆ ನೀಡಲಾಗಿದ್ದು, ಆ ಅಧಿಕಾರಿ ಶನಿವಾರ ಅಧಿಕಾರ ಕೂಡ ವಹಿಸಿಕೊಂಡಿದ್ದಾರೆ ಎಂದು ಬಿಟಿಡಿಎ ಖಚಿತ ಮೂಲಗಳು ತಿಳಿಸಿವೆ.
ನಿಯಮ ಏನು?: ಸರ್ಕಾರದ ಯಾವುದೇ ಒಂದು ಹುದ್ದೆಯಲ್ಲಿ ಇರುವ ಅಧಿಕಾರಿಗಳು ನಿವೃತ್ತಿಯಾದರೆ ಅಥವಾ ಅವರ ಹುದ್ದೆಗೆ ಬೇರೊಬ್ಬ ಅಧಿಕಾರಿಯನ್ನು ನಿಯುಕ್ತಿಗೊಳಿಸದೇ ಅವರನ್ನು ಬೇರೆಡೆ ವರ್ಗಾವಣೆ ಮಾಡಿದರೆ, ಖಾಲಿಯಾಗುವ ಆ ಹುದ್ದೆಗೆ ಅದೇ ಇಲಾಖೆಯ ಹಿರಿಯ ಅಧಿಕಾರಿಯನ್ನು ಪ್ರಭಾರಿಯನ್ನಾಗಿ ನೇಮಕ ಮಾಡಬೇಕು. ಈ ಪ್ರಭಾರಿ ನಿಯುಕ್ತಿ ವೇಳೆ ಕರ್ನಾಟಕ ಆಡಳಿತ ಸುಧಾರಣೆ ಮತ್ತು ಪಾರದರ್ಶಕ ಕಾಯಿದೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಕಾನೂನಿದೆ. ಆದರೆ, ಬಹುತೇಕ ಇಲಾಖೆಗಳಲ್ಲಿ ಇಂತಹ ನಿಯಮ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಒಟ್ಟು 8 ಉಪ ವಿಭಾಗಗಳಿದ್ದು, ಒಂದೊಂದು ಉಪ ವಿಭಾಗಕ್ಕೂ ಎಇಇ, ಎಇ, ಜೆಇ ಮುಂತಾದ ಹುದ್ದೆಗಳಿವೆ. ಗುರುವಾರ, ಉಪ ವಿಭಾಗ 5ರ ಎಇಇ ತೋಟಗಾಂವ ಅವರು ಸೇವೆಯಿಂದ ನಿವೃತ್ತಿಯಾದ ಬಳಿಕ,
ಆ ಉಪ ವಿಭಾಗದ ಎಇ (ಸಹಾಯಕ ಅಭಿಯಂತರರು)ಗಳಾದ ಮರಿಶೆಟ್ಟಿ ಮತ್ತು ತೋಟಗೇರಿ ಎಂಬ ಇಬ್ಬರು ಅಧಿಕಾರಿಗಳು, ಪ್ರಭಾರಿ ಹುದ್ದೆ ವಹಿಸಿಕೊಳ್ಳಲು ಅರ್ಹರಿದ್ದಾರೆ. ಆದರೆ, ಈ ಇಬ್ಬರು ಅಧಿಕಾರಿಗಳಿಂತಲೂ ಅತಿ ಕಿರಿಯ ಅಧಿಕಾರಿಯಾಗಿರುವ ಜ್ಯೂನಿಯರ್ ಎಂಜಿನಿಯರ್ (ಜೆಇ)ಗೆ ಪ್ರಭಾರ ಹುದ್ದೆ ಕೊಡಲಾಗಿದೆ. ಜೆಇ ಒಬ್ಬರಿಗೆ ಎಇಇ ಹುದ್ದೆಗೆ ಪ್ರಭಾರ ನೀಡಿದ್ದಕ್ಕೆ ಬಿಟಿಡಿಎ ಹಿರಿಯ ಅಧಿಕಾರಿಗಳಲ್ಲೇ ತೀವ್ರ ಅಪಸ್ವರ ಎದ್ದಿದೆ. ಸಿನಿಯಾರಿಟಿ ಆಧಾರದ ಮೇಲೆ ಕಿರಿಯ ಅಧಿಕಾರಿಯಾಗಿದ್ದರೂ ಪ್ರಭಾರ ಹುದ್ದೆ ಕೊಡಲಿ. ಆದರೆ, ಅರ್ಹತೆ ಇಲ್ಲದ ಹಾಗೂ ನಿಯಮ ಮೀರಿ ಕಿರಿಯ ಅಧಿಕಾರಿಗೆ ಪ್ರಭಾರಿ ಕೊಟ್ಟು, ಆಡಳಿತ ವ್ಯವಸ್ಥೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಜನೆ ಧಕ್ಕೆಗೆ ಇಂತಹ ಪ್ರಕರಣ ಕಾರಣ; ಹಳೆಯ ಬಾಗಲಕೋಟೆಗೆ ಒಳ ಚರಂಡಿ ಕಲ್ಪಿಸುವ ಕಾಮಗಾರಿ 10, ಹೆಕರಲ್ ಕುಡಿಯುವ ನೀರು ಪೂರೈಕೆ ಯೋಜನೆಗೆ 6 ವರ್ಷ ಹೀಗೆ ಹಲವು ಮಹತ್ವದ ಹಾಗೂ ಕೋಟ್ಯಂತರ ಯೋಜನೆಗಳು ದಾರಿ ತಪ್ಪಲು ಹಾಗೂ ನಿಗದಿತ ಅವಧಿಗೆ ಪೂರ್ಣಗೊಳ್ಳದಿರಲು ಬಿಟಿಡಿಎನಲ್ಲಿ ನಡೆಯುತ್ತಿರುವ ಕಿರಿಯರಿಗೆ ಹಿರಿಯ ಹುದ್ದೆ ಕೊಡುವ ಪ್ರಕ್ರಿಯೆಯೇ ಕಾರಣ ಎಂದು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಟಿಡಿಎ ಉಪ ವಿಭಾಗ-5ರ ಎಇಇ ನಿವೃತ್ತಿಯಾಗಿದ್ದರು. ಆ ಹುದ್ದೆಗೆ ಲಮಾಣಿ ಎಂಬ ಜ್ಯೂನಿಯರ್ ಎಂಜಿನಿಯರ್‌ರನ್ನು ಪ್ರಭಾರಿ ಎಇಇ ಆಗಿ ನೇಮಕ ಮಾಡಲಾಗಿದೆ. ಜೆಇಗೆ ಎಇಇ ಹುದ್ದೆ ಕೊಡಬಾರದು ಎಂಬ ನಿಯಮ ಇಲ್ಲ. ಆ ಉಪ ವಿಭಾಗದ ಯಾವುದೇ ಅಧಿಕಾರಿಗೂ ಪ್ರಭಾರಿ ಹುದ್ದೆ ಕೊಡಬಹುದು.
• ಅಶೋಕ ವಾಸನದ,ಮುಖ್ಯ ಎಂಜಿನಿಯರ್, ಬಿಟಿಡಿಎ
•ವಿಶೇಷ ವರದಿ