Advertisement
ಪಾಂಚಜನ್ಯ ಯಕ್ಷಗಾನ ಕಲಾ ತಂಡ ನೇರಳಕಟ್ಟೆ ಮತ್ತು ಸಿರಿಬಾಗಿಲು ಪ್ರತಿಷ್ಠಾನದವರಿಂದ ಇತ್ತೀಚೆಗೆ ಉಡುಪಿ ಪರ್ಕಳದಲ್ಲಿ ದ್ವಾರಕಾ ನಿರ್ಮಾಣ ಮತ್ತು ರುಕ್ಮಿಣಿ ಸ್ವಯಂವರ ಎಂಬ ಎರಡು ಪ್ರಸಂಗಗಳು ಮನೋಹರವಾಗಿ ಪ್ರದರ್ಶನಗೊಂಡವು.
ಪ್ರಾರಂಭದ ಕಂಸ ವಧೆಯಲ್ಲಿ ಮಧೂರು ರಾಧಾಕೃಷ್ಣ ನಾವಡರು ಪಾತ್ರದ ಯಾವ ಮಗ್ಗುಲಲ್ಲಿ ನೋಡಿದರೂ ಔಚಿತ್ಯಪೂರ್ಣವಾಗಿ ನಿರ್ವಹಿಸುವ ಮೂಲಕ ಒಟ್ಟಂದವಾಗುವ ಹಾಗೆ ನೋಡಿಕೊಂಡರು. ಅಳಿಯಂದಿರಾದ ಕೃಷ್ಣ ಮತ್ತು ಬಲರಾಮರಾಗಿ ಹನುಮಗಿರಿ ಮೇಳದ ಪ್ರಕಾಶ್ ನಾಯಕ್ ನೀರ್ಚಾಲು ಮತ್ತು ಅಕ್ಷಯ್ ಭಟ್ ಅವರ ಪಾತ್ರ ಮಾವ ಕಂಸನನ್ನು ಕುಚೇಷ್ಟೆಯ ಮೂಲಕ ರಂಜಿಸಲು ಯತ್ನಿಸಿ, ಮುಂದಿನ ಉದ್ದೇಶವನ್ನೂ ಬಿಂಬಿಸಬೇಕಾಗಿ ಇರುವು ದರಿಂದ ಉತ್ತಮ ಪ್ರಯತ್ನ ಮಾಡಿದರು. ರಾಜ ರಜಕನಾಗಿ ಮಹೇಶ ಮಣಿಯಾಣಿ ಅವರ ಹಾಸ್ಯ ಉತ್ತಮ ನಿರ್ವಹಣೆ ಯೊಂದಿಗೆ ಸರಿದೂಗಿಸುವಂತಾಯಿತು. ಕಂಸ ವಧೆಯ ನಂತರ ಮಹಾಕಲಿ ಮಗಧೇಂದ್ರದ ಮಾಗಧನಾಗಿ ಶಂಭಯ್ಯ ಭಟ್‌ರ ನಿರ್ವಹಣೆ ಚೆನ್ನಾಗಿತ್ತು. ಆಸ್ತಿ ಮತ್ತು ಪ್ರಾಸ್ತಿಯರಾಗಿ ರಕ್ಷಿತ್ ರೈ ದೇರ್ಲಂಪಾಡಿ ಮತ್ತು ರಾಜೇಶ್ ನಿಟ್ಟೆ ಅವರು ಮಾಗಧನಲ್ಲಿ ಮನನೊಂದು ಭಿನ್ನವಿಸುವ ಪರಿ ಸುಂದರವಾಗಿ ಮೂಡಿಬಂದಿತು. ಲಕ್ಷ್ಮಣ ಮರಕಡರು ಬೇರೆ ಬೇರೆ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಕೃಷ್ಣನಾಗಿ ಮನಗೆದ್ದರು. ಶಶಿಕಿರಣ ಕಾವು ಅವರಂತಹ ಕಲಾವಿದರಿಗೆ ಹೇಳಿ ಮಾಡಿಸಿದಷ್ಟು ಸರಿಯಾಗಿ ಕಾಲಯವನ ಪಾತ್ರ ಒಪ್ಪುತ್ತಿತ್ತು. ದ್ವಾರಕಾ ನಿರ್ಮಾಣವಾಗುವಲ್ಲಿ ಹಿಮ್ಮೇಳದಲ್ಲಿ ವಿಶಿಷ್ಟ ರಾಗಗಳ ಪ್ರಸ್ತುತಿಯ ಮೂಲಕ ಭಾಗವತ ರವಿಚಂದ್ರ ಕನ್ನಡಿಕಟ್ಟೆಯವರು ಮನರಂಜಿಸಿದರು. ಲವ ಕುಮಾರ ಐಲರು ಸುಂದರವಾಗಿ ಮದ್ದಳೆ ನುಡಿಸುವುದರ ಮೂಲಕ ಪದ್ಯಗಳ ರಸಾಸ್ವಾದನೆಗೆ ಅವಕಾಶ ಕೊಟ್ಟರು. ದೇಲಂತಮಜಲು ಸುಬ್ರಹ್ಮಣ್ಯ ಭಟ್ ಚೆಂಡೆಯ ನುಡಿತವು ಅದ್ಭುತವಾಗಿದ್ದುದರಿಂದ ಅದೊಂದು ಪರಿಪೂರ್ಣ ಯಕ್ಷಗಾನವೆನಿಸಿತು.
Related Articles
ಭಾಗವತರಾಗಿ ಧರ್ಮಸ್ಥಳ ಮೇಳದ ಅನುಭವಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮುಂದುವರೆಸಿ, ಚಕ್ರತಾಳದಲ್ಲಿ ಸಹಕರಿಸಿದವರು ನೀಶ್ವತ್ ಜೋಗಿ.
ಪೆರುವಡಿ ಸುಬ್ರಹ್ಮಣ್ಯ ಭಟ್ ಅಗ್ನಿದ್ಯೋತ ಪಾತ್ರದಲ್ಲಿ ಬ್ರಾಹ್ಮಣನಾಗಿ ಪಾತ್ರಕ್ಕೆ ಜೀವ ತುಂಬಿದರೆ ಶಿಶುಪಾಲನಾಗಿ ಪ್ರಕಾಶ ನಾಯಕ್ ಮತ್ತು ರುಕ್ಮನಾಗಿ ಜಗದಭಿರಾಮ ಪಡುಬಿದ್ರೆ ಅವರು ಪ್ರಸಂಗಾವಧಾನತೆಯನ್ನು ಮೆರೆದರು. ರಾಜೇಶ್ ನಿಟ್ಟೆ ಅವರು ರುಕ್ಮಿಣಿ ಪಾತ್ರವನ್ನು ನಿರ್ವಹಿಸಿದರು. ಗುಂಡಿಮಜಲು ಗೋಪಾಲ ಭಟ್ಟರ ಬಲರಾಮ ಬಲ ತುಂಬುವಂತಹ ಶಾರೀರ ಹೊಂದಿರುವುದರಿಂದ ಮನಸಾ ಒಪ್ಪುವಲ್ಲಿ ಸಫಲವಾಯಿತು.
Advertisement
ಸಂತೋಷ್ ಕೇಳ್ಕರ್, ಸುಲ್ಕೇರಿ