Advertisement

ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲ-ಆತಂಕ

03:23 PM Nov 30, 2021 | Team Udayavani |

ಸಿರುಗುಪ್ಪ: ತಾಲೂಕಿನ ಶಾನವಾಸಪುರ ಗ್ರಾಮದಲ್ಲಿರುವ 2ನೇ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿ ಅಲ್ಲಲ್ಲಿ ಕುಸಿದು ಬಿದ್ದಿದ್ದು, ಇನ್ನು ಅಲ್ಲಲ್ಲಿ ಇನ್ನೂ ಬೀಳುತ್ತಲೇ ಇದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು ಹೊರಗಡೆ ಕೂಡಿಸಲು ಸಾಧ್ಯವಾಗದೆ ಒಳಗಡೆ ಬೀಳುತ್ತಿರುವ ಕಟ್ಟಡದಲ್ಲಿಯೇ ಮಕ್ಕಳನ್ನು ಕೂಡಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

Advertisement

ಸುಮಾರು 14ವರ್ಷಗಳ ಹಿಂದೆ ಈ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಕಟ್ಟಲಾಗಿದ್ದು, ಕಟ್ಟಡದ ಮೇಲ್ಛಾವಣಿ ಮೇಲೆ ಬೀಳುವ ಮಳೆನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲದ ಕಾರಣ ಸಣ್ಣ ಮಳೆ ಬಂದರೆ ಸಾಕು ಅಂಗನವಾಡಿ ಕೇಂದ್ರದಲ್ಲಿ ನೀರು ತೊಟ್ಟಿಕ್ಕುತ್ತದೆ. ಕೆಲ ವರ್ಷಗಳಿಂದ ನೀರು ತೊಟ್ಟಿಕ್ಕುತ್ತಿರುವುದರಿಂದ ಮೇಲ್ಛಾವಣಿಗೆ ಅಳವಡಿಸಿದ ಸಿಮೆಂಟ್‌ ಉದುರಿ ಬೀಳುತ್ತಿದ್ದು, ಕಬ್ಬಿಣದ ರಾಡುಗಳು ಕಂಡು ಬರುತ್ತಿವೆ. ಮಳೆನೀರಿನಿಂದಾಗಿ ಕಬ್ಬಿಣದ ರಾಡುಗಳು ಸಹ ತುಕ್ಕು ಹಿಡಿದಿದ್ದು, ಮಳೆಬಂದರೆ ಸಾಕು ಯಾವಾಗ ಬೀಳುತ್ತದೋ ಎನ್ನುವ ಭಯದಲ್ಲಿಯೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಒಟ್ಟು 45 ಮಕ್ಕಳು ಈ ಅಂಗನವಾಡಿ ಕೇಂದ್ರಕ್ಕೆ ಬರಲು ನೋಂದಣಿ ಮಾಡಿಸಿದ್ದು 10ರಿಂದ 20 ಜನ ಮಕ್ಕಳು ಪ್ರತಿನಿತ್ಯವೂ ಇಲ್ಲಿಗೆ ಬರುತ್ತಿದ್ದಾರೆ. ಮಕ್ಕಳು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಆಗಾಗ ಮೇಲ್ಛಾವಣಿಯ ಸಿಮೆಂಟ್‌ ಉದುರಿ ಬೀಳುವುದು ಸಾಮಾನ್ಯವಾಗಿರುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ಮಕ್ಕಳ ಮೇಲೆ ಸಿಮೆಂಟ್‌ ಉದುರಿ ಬಿದ್ದಿಲ್ಲ, ಆದರೆ ಕೊರೊನಾ ಸಮಯದಲ್ಲಿ ಇದೇ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಮೇಲ್ಛಾವಣಿ ಸಿಮೆಂಟ್‌ ಉದುರಿ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದವು. ಮೇಲ್ಛಾವಣಿ ಕುಸಿದು ಬೀಳುವ ಹಂತ ತಲುಪಿದ್ದರೂ ಮೇಲ್ಛಾವಣಿ ರಿಪೇರಿ ಮಾಡಿಸಲು ಮುಂದಾಗದ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿಯವರು ಕಟ್ಟಡದ ಹೊರಭಾಗಕ್ಕೆ ಬಣ್ಣಬಳಿದು ವಿವಿಧ ಆಕರ್ಷಕ ಚಿತ್ರಗಳನ್ನು ಬರೆಸಿದ್ದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.

ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುತ್ತಿರುವ ಬಗ್ಗೆ ನಮ್ಮ ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಕಟ್ಟಡ ರಿಪೇರಿ ಮಾಡಿಸಿದರೆ ಮಕ್ಕಳನ್ನು ಕೂಡಿಸಲು ಅನುಕೂಲವಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ದ್ಯಾವಮ್ಮ ತಿಳಿಸಿದ್ದಾರೆ.

ಅಂಗನವಾಡಿ ಕಟ್ಟಡದ ಮೇಲ್ಛಾವಣಿ ರಿಪೇರಿಗಾಗಿ ಯೋಜನೆ ಸಿದ್ಧಪಡಿಸಲಾಗಿದ್ದು ಶೀಘ್ರ ಕೆಲಸ ಆರಂಭಿಸಲಾಗುವುದು. -ವೀರೇಶ್‌, ಪಿಡಿಒ

Advertisement

ಶಾನವಾಸಪುರದ 2ನೇ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದನ್ನು ರಿಪೇರಿ ಮಾಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. –ಜಲಾಲಪ್ಪ, ಸಿಡಿಪಿಒ

Advertisement

Udayavani is now on Telegram. Click here to join our channel and stay updated with the latest news.

Next