ನರೇಗಲ್ಲ: ಪಪಂ ವತಿಯಿಂದ ನಗರದ ಸೌಂದರ್ಯ ಹೆಚ್ಚಿಸುವ, ಮಕ್ಕಳಿಗೆ ಆಟವಾಡಲು, ವೃದ್ಧರು ವಿಶ್ರಾಂತಿ ಪಡೆಯಲೆಂದು ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಉದ್ಯಾನಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ಹಾಳು ಕೊಂಪೆಯಾಗಿ ಮಾರ್ಪಟ್ಟಿವೆ.
ಹಸಿರಿನಿಂದ ಕಂಗೊಳಿಸುವ ನಗರವನ್ನು ಮತ್ತಷ್ಟು ಹಸಿರಾಗಿಸುವ ಉದ್ದೇಶದಿಂದ ಪಟ್ಟಣದ ಬುಲ್ಡೋಜರ್ ನಗರ, ಅನ್ನದಾನೇಶ್ವರ ಕಾಲೇಜು ಹತ್ತಿರ, ಈಶ್ವರ ನಗರ, ಪಪಂ ಹತ್ತಿರ ಲಕ್ಷಾಂತರ ರೂ. ಖರ್ಚು ಮಾಡಿ ಉದ್ಯಾನ ನಿರ್ಮಿಸಲಾಗಿತ್ತು. ಆದರೆ, ಉದ್ಯಾನ ನಿರ್ಮಾಣ ಮಾಡಿ ನಿರ್ವಹಣೆ ಮರೆತ ಕಾರಣದಿಂದ ಇಂದು ಎಲ್ಲ ಉದ್ಯಾನಗಳಲ್ಲಿ ಗಿಡ-ಗಂಟಿ ಬೆಳೆಸಿವೆ. ಬಿಡಾಡಿ ದನಗಳು- ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಉದ್ಯಾನವನಗಳ ಹತ್ತಿರ ಸುಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಪಪಂಗೆ ಹೊಂದಿಕೊಂಡಿರುವ ಉದ್ಯಾನವನ ಕುಡುಕರ ಅಡ್ಡೆಯಾಗಿದೆ. ಹಗಲಲ್ಲಿ ಹಂದಿಗಳ ಸಾಮ್ರಾಜ್ಯವಾದರೆ, ಕತ್ತಲಲ್ಲಿ ಕುಡುಕರಿಂದ ತುಂಬಿರುತ್ತದೆ. ಸಾರಾಯಿ ಬಾಟಲಿ, ಪ್ಲಾಸ್ಟಿಕ್, ಗಾಜು ಸೇರಿದಂತೆ ಮುಳ್ಳು-ಕಂಟಿಯಿಂದ ಉದ್ಯಾನವನ ಎಲ್ಲಿದೆ? ಎಂದು ಹುಡುಕುವ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ.
ಅನ್ನದಾನಿಶ್ವರ ಕಾಲೇಜು ಹತ್ತಿರದ ಉದ್ಯಾನವನದಲ್ಲಿ ವಾಯು ವಿಹಾರಕ್ಕಾಗಿ ಹಾಕಲಾಗಿದ್ದ ಪೆವರ್ ಕಿತ್ತು ಹೋಗಿವೆ. ವಿಶ್ರಾಂತಿಗಾಗಿ ಹಾಕಬೇಕಿದ್ದ ಕುರ್ಚಿ ಜೋಡಿಸದೇ ಹಾಗೆಯೇ ಇಡಲಾಗಿದೆ. ಬುಲ್ಡೋಜರ್ ನಗರದ ಉದ್ಯಾನವನ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯವಿಲ್ಲದಾಗಿದೆ
ಉದ್ಯಾನದ ಜಾಗೆ ತಮಗೆ ಸೇರಿದ್ದು ಎಂದು ಸ್ಥಳೀಯರೊಬ್ಬರು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು, ಅಧಿ ಕಾರಿಗಳ ತಪ್ಪಿನಿಂದ ಸಾರ್ವಜನಿಕರ ಹಣ ವ್ಯರ್ಥವಾಗಿದೆ ಎನ್ನುವ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಈಶ್ವರ ನಗರದ ಉದ್ಯಾನದಲ್ಲಿ ವಿಶ್ರಾಂತಿಗಾಗಿ ಕುರ್ಚಿಗಳು ಮಾತ್ರ ಇದ್ದು, ಯಾವುದೇ ಮಕ್ಕಳ ಆಟಿಕೆಗಳಾಗಲಿ, ಗಿಡಗಳಾಗಲಿ ಇಲ್ಲದೇ ಬಣ ಬಣ ಎನ್ನುತ್ತಿದೆ ಎನ್ನುತ್ತಾರೆ ಸಾರ್ವಜನಿಕರು. ಉದ್ಯಾನಗಳ ನಿರ್ವಹಣೆಗೆ ವಾರ್ಷಿಕ ಹಣಕಾಸು ಯೋಜನೆ ಮತ್ತು ಪಪಂ ನಿಧಿಯಲ್ಲಿ ಅಗತ್ಯವಿರುವ ಕಾಮಗಾರಿ ಹಣ ಬಳಸಲಾಗುತ್ತಿದೆ. ಆದರೆ, ಉದ್ಯಾನಗಳು ಮಾತ್ರ ಅಭಿವೃದ್ಧಿ ಕಾಣದಾಗಿವೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಉದ್ಯಾನಗಳನ್ನು ಹಾಳುಗೆಡವದೇ ಸಮರ್ಪಕ ನಿರ್ವಹಣೆ ಮಾಡಬೇಕೆನ್ನುವುದು ಸ್ಥಳೀಯರ ಒತ್ತಾಯ.
ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ನರೇಗಲ್ಲ ಪಟ್ಟಣದಲ್ಲಿ ಒಂದೇ ಒಂದು ಸುವ್ಯವಸ್ಥಿತ ಉದ್ಯಾನ ಇಲ್ಲ. ಇರುವ ಉದ್ಯಾನಗಳಲ್ಲಿ ಕಾಲಿಡಲು ಭಯವಾಗುವ ಪರಿಸ್ಥಿತಿ ಇದೆ. ಪಪಂ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಉದ್ಯಾನಗಳು ಇದ್ದೂ ಇಲ್ಲದಂತಾಗಿವೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಉದ್ಯಾನಗಳ ಅಭಿವೃದ್ಧಿಗೆ ಮುಂದಾಗಬೇಕು.
–ಕೆ.ಜಿ. ಉಡುಪಿ ಹಿರಿಯ ನಾಗರಿಕರು, ನರೇಗಲ್ಲ
-ಸಿಕಂದರ ಎಂ. ಆರಿ