ಲಿಂಗಸುಗೂರು: ಪಟ್ಟಣದಲ್ಲಿ ವಿವಿಧ ಇಲಾಖೆಯ ಕಟ್ಟಡಗಳು ಹಾಗೂ ವಸತಿಗೃಹಗಳು ಬಳಕೆ ಇಲ್ಲದೇ ಪಾಳು ಬಿದ್ದು ದಶಕಗಳೇ ಕಳೆಯುತ್ತಿದ್ದರೂ ಇವುಗಳಿಗೆ ಕಾಯಕಲ್ಪ ನೀಡಲು ಆಯಾ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಆಂಗ್ಲರ ಆಡಳಿತದಲ್ಲಿ ಲಿಂಗಸುಗೂರು ಸೈನಿಕರ ನೆಲೆಯಾಗಿತ್ತು. ಈ ಕಾರಣಕ್ಕಾಗಿಯೇ ಲಿಂಗಸುಗೂರನ್ನು ಛಾವಣಿ ಎಂದು ಕರೆಯಲಾಗುತ್ತಿತ್ತು. ಆಂಗ್ಲರು ತಮ್ಮ ಅಧಿಕಾರಿಗಳಿಗಾಗಿ ಕಚೇರಿ ಮತ್ತು ವಸತಿಗೃಹಗಳನ್ನು ವಿಶಾಲವಾದ ಜಾಗೆಯಲ್ಲಿ ನಿರ್ಮಿಸಿದ್ದರು. ಅಂದು ಬಳಕೆ ಮಾಡಿದ ಕಟ್ಟಡಗಳಲ್ಲಿಯೇ ಇಂದು ಕೆಲವು ಇಲಾಖೆಗಳ ಕಚೇರಿಗಳನ್ನು ನಡೆಸಲಾಗುತ್ತಿದೆ.
ಹಾಳಾಗುತ್ತಿವೆ ವಸತಿಗೃಹ: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೆಲೆಗಾಗಿ ಪಟ್ಟಣದಲ್ಲಿ ವಿಶಾಲವಾದ ಆವರಣದಲ್ಲಿ ಮನೆ ನಿರ್ಮಿಸಲಾಗಿದೆ. ಆದರೆ ಕಳೆದ 8-10 ವರ್ಷಗಳಿಂದ ತಾಪಂ ಇಒಗಳು ಇಲ್ಲಿ ವಾಸ ಮಾಡದ್ದರಿಂದ ಮನೆ ಪಾಳು ಬಿದ್ದಿದೆ. ಇನ್ನು ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಪಿಎಸ್‌ಐ ವಸತಿಗೆ ನಿರ್ಮಿಸಿದ ಮನೆ ಶಿಥಿಲಾವಸ್ಥೆಯಲ್ಲಿದೆ. ಇದರ ಪಕ್ಕದಲ್ಲೇ ಪಿಎಸ್‌ಐಗೆ ಹೊಸ ಮನೆ ನಿರ್ಮಿಸಲಾಗಿದೆ. ಆದರೆ ಹಳೆ ಕಟ್ಟಡ ತೆರವುಗೊಳಿಸದೇ ಹಾಗೇ ಬಿಡಲಾಗಿದೆ. ಇದಲ್ಲದೆ ಠಾಣೆ ಆವರಣದಲ್ಲಿ ಹಳೇ ಠಾಣೆ ಹಾಗೂ ಇನ್ನೂ 2-3 ಕಟ್ಟಡಗಳು ಬಳಕೆಯಿಲ್ಲದೆ ಪಾಳು ಬಿದ್ದಿವೆ. ಸಹಾಯಕ ಆಯುಕ್ತರ ಕಚೇರಿ ಬಳಿಯಲ್ಲಿ ಈ ಹಿಂದೆ ಚುನಾವಣೆ ವಿಭಾಗ ಹಾಗೂ ಸಭಾ ಭವನದ ಕಟ್ಟಡ ನಿರ್ವಹಣೆ ಹಾಗೂ ಬಳಕೆ ಕೊರತೆಯಿಂದ ಪಾಳುಬಿದ್ದು ಹಾಳಾಗಿದೆ.
ಈಶಾನ್ಯ ಸಾರಿಗೆ ಸಂಸ್ಥೆಯ ಘಟಕದ ವ್ಯವಸ್ಥಾಪಕ ಸೇರಿ ಇತರೆ ಸಿಬ್ಬಂದಿಗೆ ನಿರ್ಮಿಸಿದ ವಸತಿ ಗೃಹಗಳು ಅವಸಾನ ಹಂತಕ್ಕೆ ತಲುಪಿವೆ. ಇದರಿಂದ ನೌಕರರು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.
ವಸತಿಗೃಹ, ಕಚೇರಿ ಕಟ್ಟಡಗಳು ಹಲವು ವರ್ಷಗಳಿಂದ ನಿರುಪಯುಕ್ತವಾಗಿವೆ. ಕೆಲ ಕಟ್ಟಡ ಗಟ್ಟಿಮುಟ್ಟಾಗಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದಿವೆ. ಕೆಲ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಸಹಾಯಕ ಆಯುಕ್ತರ ಕಚೇರಿ ಬಳಿ ಹಾಗೂ ತಾಪಂ ಇಒ ನಿವಾಸದ ಕಟ್ಟಡಗಳು ಇರುವ ಅಷ್ಟೂ ಜಾಗದಲ್ಲಿ ಮುಳ್ಳಿನಗಿಡಗಳು ಬೆಳೆದಿವೆ. ಇಲ್ಲಿ ಪುಂಡ, ಪೋಕರಿಗಳಿಗೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಪೊಲೀಸ್ ಠಾಣೆಯಲ್ಲಿ ಹಳೇ ಕಟ್ಟಡಗಳು ಘನತ್ಯಾಜ್ಯ ಸಂಗ್ರಹ ಕೇಂದ್ರಗಳಾಗಿವೆ. ಮನೆಯಲ್ಲಿದ್ದ ಪರಿಕರಗಳು ಕಳ್ಳರ ಪಾಲಾಗಿವೆ.
ನಿರ್ಲಕ್ಷ್ಯ: ವಸತಿಗೃಹಗಳತ್ತ ಗಮನಹರಿಸಿ ಹಳೇ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವತ್ತ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಕಟ್ಟಡಗಳು ಸಂಪೂರ್ಣ ಹಾಳಾಗಿವೆ. ಬೇರೆ ಬೇರೆ ಉದ್ದೇಶಕ್ಕೆ ಅನುದಾನ ಮಂಜೂರಾತಿ ಪಡೆಯಲು ಅಧಿಕಾರಿಗಳು ತೋರುವ ಆಸಕ್ತಿ ತಮ್ಮ ವಸತಿಗೃಹ ದುರಸ್ತಿಗೆ ಇಲ್ಲದಾಗಿದೆ.
ವಸತಿಗೃಹ ಹಳೆಯದಾಗಿದ್ದು, ಅದನ್ನು ತೆರವುಗೊಳಿಸಲು ಕನಿಷ್ಠವೆಂದರೂ 10 ಲಕ್ಷ ರೂ. ಬೇಕಾಗುತ್ತಿದೆ. ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಜಿಪಂ ಸಿಇಒ ಅವರಿಗೆ ಮನವಿ ಮಾಡಿದ್ದೇನೆ-ಪಂಪಾಪತಿ ಹಿರೇಮಠ, ತಾಪಂ ಇಒ ಲಿಂಗಸುಗೂರು
-ಶಿವರಾಜ ಕೆಂಭಾವಿ