Advertisement

ತೆರವುಗೊಳ್ಳದ ಪಾಳು ಬಿದ್ದ ಕಟ್ಟಡ

10:23 PM Jan 19, 2021 | Team Udayavani |

ಬಂಟ್ವಾಳ: ಸರಕಾರವು ವಿವಿಧ ಇಲಾಖೆಗಳಿಗೆ ಹೊಸ ಕಟ್ಟಡಕ್ಕೆ ಅನುದಾನ ನೀಡಿ ಕಟ್ಟಡ ನಿರ್ಮಾಣ ಮಾಡುತ್ತಿದೆ. ಆದರೆ ಹಳೆ ಕಟ್ಟಡವನ್ನು ಹಾಗೇ ಬಿಟ್ಟು ಪಾಳು ಬೀಳುವಂತೆ ಮಾಡುತ್ತಿದೆ. ಇಂತದ್ದೇ ಕಟ್ಟಡ ಪಾಣೆಮಂಗಳೂರಿನ ಗೂಡಿನ ಬಳಿಯಲ್ಲೊಂದಿದೆ. ಪಶು ಪಾಲನಾ ಇಲಾಖೆಯ ಹಳೆ ಕಟ್ಟಡ ಇದಾಗಿದ್ದು, ಜಾಗ ಪೊಲೀಸ್‌ ಇಲಾಖೆಗೆ ಹಸ್ತಾಂತ ರವಾದರೂ ಹಳೆ ಕಟ್ಟಡ ಹಾಗೇ ಇದೆ.

Advertisement

ಗೂಡಿನಬಳಿಯಲ್ಲಿ ಪಾಣೆ ಮಂಗಳೂರು ಹಳೆ ಸೇತುವೆಯ ಪಕ್ಕದಲ್ಲಿ ಈ ಕಟ್ಟಡವಿದ್ದು, ಗೋಡೆಗಳು ಸುಸ್ಥಿತಿಯಲ್ಲಿದ್ದರೂ, ಅರ್ಧಂಬರ್ಧ ಮೇಲ್ಛಾವಣಿ ಇದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಬಂಟ್ವಾಳದ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಗೂಡಿನಬಳಿಯ ಇನ್ನೊಂದು ಭಾಗದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡ ಬಳಿಕ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡಿತ್ತು.

ಬಂಟ್ವಾಳ  ಸಂಚಾರ   ಪೊಲೀಸ್‌ ಠಾಣೆಗೆ ಸ್ವಂತ ಕಟ್ಟಡ ಇಲ್ಲದೇ ಇರುವು ದರಿಂದ ಪಶುಪಾಲನ ಇಲಾಖೆಯ ಈ ನಿವೇಶನವನ್ನು ಸಂಚಾರ ಠಾಣಾ ಕಟ್ಟಡ ನಿರ್ಮಾಣಕ್ಕಾಗಿ ಪೊಲೀಸ್‌ ಇಲಾಖೆಗೆ ನೀಡಲಾಗಿದೆ. ಆದರೆ ಈ ನಿವೇಶನದಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳಾವಕಾಶ ಇಲ್ಲದೇ ಇರುವುದರಿಂದ ಠಾಣಾ ಕಟ್ಟಡ ನಿರ್ಮಾಣವಾಗಿಲ್ಲ.

ಜತೆಗೆ ಬೇರೆ ಕಡೆಯೂ ಠಾಣೆಗೆ ಸೂಕ್ತ ಸ್ಥಳಾವಕಾಶ ಸಿಗದೇ ಇರುವುದರಿಂದ ಹುಡುಕಾಟ ಇನ್ನೂ ಮುಂದುವರಿದಿದೆ.

ಪಾಳು ಬಿದ್ದಿದೆ ಕಟ್ಟಡ :

Advertisement

ಪಶುಪಾಲನ ಇಲಾಖೆಯ ಹಳೆ ಕಟ್ಟಡವು ಪಾಳು ಬಿದ್ದುಕೊಂಡಿದ್ದು, ಮೇಲ್ಛಾವಣಿಯ ಮರಮಟ್ಟು ಸಂಪೂರ್ಣ ಅವ್ಯಸ್ಥೆಯಲ್ಲಿದೆ. ಹೀಗಾಗಿ ಹಂಚು ಉದುರುತ್ತಿದ್ದು, ಸುತ್ತಮುತ್ತಲೂ ಮನೆಗಳಿರುವುದರಿಂದ ಯಾರಾದರೂ ಕಟ್ಟಡದ ಒಳಗೆ ಹೋಗಿ ಅಪಾಯ ಸಂಭವಿಸಿದಲ್ಲಿ ಯಾರು ಹೊಣೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಈ ರೀತಿ ಕಟ್ಟಡಗಳು ಪಾಳು ಬಿದ್ದಾಗ ಅಪಾಯಕಾರಿಯಾಗುವ ಜತೆಗೆ ಅನ್ಯ ಕಾರ್ಯಗಳಿಗೂ ಬಳಕೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಳೆ ಕಟ್ಟಡ ವನ್ನು ತೆರವುಗೊಳಿಸಿದರೆ ಉತ್ತಮ.

ಮತ್ತೂಂದೆಡೆ ಕಟ್ಟಡವಿರುವ ನಿವೇಶನಕ್ಕೆ ಯಾವುದೇ ತಡೆಬೇಲಿ ಇಲ್ಲದೇ ಇರುವುದರಿಂದ ಯಾರಿಗೂ ಪ್ರವೇಶಕ್ಕೆ ಅವಕಾಶವಿದೆ. ಈ ನಿವೇಶನದ ಒಂದಷ್ಟು ಜಾಗ ಈಗಾಗಲೇ ಒತ್ತುವರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಸಂಬಂಧಪಟ್ಟ ಜಾಗವನ್ನು ಅಳತೆ ಮಾಡಿ ಸೂಕ್ತ ತಡೆಬೇಲಿ ಹಾಕುವಂತೆ ಆಗ್ರಹಗಳು ಕೇಳಿಬರುತ್ತಿದೆ. ಸಂಬಂಧಪಟ್ಟ ಅಧಿಕಾರಿ ಈ ಕುರಿತು ಯೋಚಿಸಿ ಕ್ರಮ ತೆಗೆದುಕೊಳ್ಳಬೇಕಿದೆ. ಸಂಚಾರ ಪೊಲೀಸ್‌ ಠಾಣೆ ನಿರ್ಮಾಣಕ್ಕೆ ಇಲ್ಲಿ ಸ್ಥಳಾವಕಾಶದ ಕೊರತೆ ಇದ್ದರೆ ಬೇರೆ ಯಾವುದಾದರೂ ಉದ್ದೇಶಗಳಿಗೆ ಬಳಕೆ ಮಾಡುವ ಕುರಿತು ಸರಕಾರಿ ವ್ಯವಸ್ಥೆ ಚಿಂತಿಸಬೇಕಿದೆ.

ಇಲಾಖೆಗೆ ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಹಳೆ ಕಟ್ಟಡದ ನಿವೇಶನವನ್ನು ಕಾನೂನು ಪ್ರಕಾರ ಬಂಟ್ವಾಳ ಸಂಚಾರ ಠಾಣೆಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಪ್ರಸ್ತುತ ಆ ನಿವೇಶನವು ನಮ್ಮ ಇಲಾಖೆಯಲ್ಲಿಲ್ಲ.-ಡಾ| ಅವಿನಾಶ್‌,ಮುಖ್ಯ ಪಶುವೈದ್ಯಾಧಿಕಾರಿ, ಬಂಟ್ವಾಳ ಪಶು ಇಲಾಖೆ.

ಗೂಡಿನಬಳಿಯಲ್ಲಿ ಸಂಚಾರ ಠಾಣೆಗೆ ನಿವೇಶನ ಹಂಚಿಕೆಯಾದರೂ, ಅಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳಾವಕಾಶವಿಲ್ಲ. ಹೀಗಾಗಿ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ಹುಡುಕಲಾಗುತ್ತಿದೆ.-ರಾಜೇಶ್‌ ಕೆ.ವಿ.ಪಿಎಸ್‌ಐ, ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆ.

Advertisement

Udayavani is now on Telegram. Click here to join our channel and stay updated with the latest news.

Next