ಹುಮನಾಬಾದ: ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ 50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಎಪಿಎಂಸಿ ಮುಚ್ಚು ಹರಾಜು ಕಟ್ಟೆ ಒಂದು ದಿನವೂ ವ್ಯಾಪಾರಸ್ಥರಿಗೆ ಬಳಕೆಯಾಗದೆ ಇದೀಗ ಪಾಳುಬಿದ್ದಿದೆ.
2016-17ನೇ ಸಾಲಿನಲ್ಲಿ ನಬಾರ್ಡ್ ಆರ್.ಎ.ಡಿಎಫ್ ಯೋಜನೆ ಅಡಿಯಲ್ಲಿ 50 ಲಕ್ಷ ಮೊತ್ತದಲ್ಲಿನ ವ್ಯಾಪಾರಸ್ಥರ ಅನುಕೂಲಕ್ಕಾಗಿ ಉಪ ಮಾರುಕಟ್ಟೆಯಲ್ಲಿ ಮುಚ್ಚು ಹರಾಜು ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೆ, ಇಂದಿಗೂ ಕೂಡ ಮುಚ್ಚು ಹರಾಜು ಕಟ್ಟೆಯಲ್ಲಿ ಒಂದು ದಿನವೂ ವ್ಯಾಪಾರ-ವಹಿವಾಟು ನಡೆದಿಲ್ಲ.
ಸದ್ಯ ವ್ಯಾಪಾರಸ್ಥರಿಗಾಗಿ ನಿರ್ಮಿಸಿದ ಶೇಡ್ ಬಾಳು ಬಿದ್ದಂತೆ ಭಾಸವಾಗುತ್ತಿದೆ. ಇಲ್ಲಿನ ಎಪಿಎಂಸಿ ಸಮಿತಿ ಅಧಿಕಾರಿಗಳು ಮಾತ್ರ ಉಪ ಮಾರುಕಟ್ಟೆ ಅಭಿವೃದ್ಧಿಪಡಿಸಲು ಹಾಗೂ ಇಲ್ಲಿ ಮೂಲ ಸೌಕರ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಭೇಟಿ ನೀಡದ ಅಧಿಕಾರಿಗಳು
ದುಬಲಗುಂಡಿ ಎಪಿಎಂಸಿ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿ ಆಡಳಿತ ಕಚೇರಿ ಕೂಡ ಇದೆ. 2016-17ನೇ ಸಾಲಿನಲ್ಲಿ 2 ಲಕ್ಷ ಅನುದಾನದಲ್ಲಿ ಆಡಳಿತ ಕಚೇರಿ ದುರಸ್ತಿ ಕೂಡ ಮಾಡಲಾಗಿದೆ. 3 ಲಕ್ಷ ರೂ. ಮೊತ್ತದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳು ನಿರ್ಮಿಸಲಾಗಿದೆ. ಆದರೆ ಸಾಧ್ಯ ಎರಡು ನೀರಿನ ತೊಟ್ಟಿಗಳಲ್ಲಿ ಸರಾಯಿ ಬಾಟಲುಗಳು ಎದ್ದುಕಾಣುತ್ತಿವೆ. ಸದ್ಯ ದುಬಲಗುಂಡಿ ಎಪಿಎಂಸಿ ಉಪ-ಮಾರುಕಟ್ಟೆ ಸಮಸ್ಯೆಗಳ ಆಗರವಾಗಿ ನಿರ್ಮಾಣಗೊಂಡಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿಯೂ ಇಲ್ಲಿನ ವ್ಯಾಪಾರಸ್ಥರಿಗೆ ಮಾತ್ರ ಯಾವುದೇ ವ್ಯವಸ್ಥೆಗಳು ಇಲ್ಲಿ ಕಂಡುಬರುತ್ತಿಲ್ಲ. ಅಲ್ಲದೆ, ಕಳೆದ ಅನೇಕ ವರ್ಷಗಳಿಂದ ಯಾವ ಅಧಿಕಾರಿಗಳು ಕೂಡ ಇಲ್ಲಿ ಬಂದಿಲ್ಲ ಎಂದು ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪೊಲೀಸ್ ಗೆ ಆವಾಜ್ ಹಾಕಿದ ಮೂಡಿಗೆರೆ ಶಾಸಕ ಕುಮಾರಸ್ವಾಮಿ; ಆಡಿಯೋ ವೈರಲ್
ಮೂಲ ಸೌಕರ್ಯ ಕಲ್ಪಿಸಿ
ದುಬಲಗುಂಡಿ ಗ್ರಾಮದಲ್ಲಿ ಹುಮನಾಬಾದ ಎಪಿಎಂಸಿ ಸಮಿತಿಗೆ ಸೇರಿದ ಕೊಟ್ಯಾಂತರ ಮೌಲ್ಯದ 7.28 ಎಕರೆ ಭೂಮಿ ಇದೆ. 2010ರಲ್ಲಿ ದುಬಲಗುಂಡಿ ಉಪ ಮಾರುಕಟ್ಟೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿನ ಜಮೀನಿನಲ್ಲಿ ಮಳಿಗೆ ನಿರ್ಮಾಣಕ್ಕಾಗಿ 60 ನಿವೇಶನಗಳು ರೂಪಿಸಲು ನೀಲಿನಕ್ಷೆ ತಯಾರಿಸಲಾಗಿತ್ತು. 2011ರಲ್ಲಿ ದುಬಲಗುಂಡಿ ವಲಯದ 18 ವರ್ತಕರಿಗೆ ಕರಾರು ಬದ್ಧವಾಗಿ ನಿವೇಶನ ಹಂಚಿಕೆ ಕೂಡಾ ಮಾಡಲಾಗಿತ್ತು. ಕರಾರಿನ ಪ್ರಕಾರ ವರ್ತಕರು ನಿವೇಶನದಲ್ಲಿ ಅಂಗಡಿ ನಿರ್ಮಾಣ ಮಾಡಬೇಕಿತ್ತು. ಆದರೆ ಎಪಿಎಂಸಿ ಸಮಿತಿಯವರು ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಮೂಲ ಸೌಲಭ್ಯಗಳು ಕಲ್ಪಿಸಿದ ಹಿನ್ನೆಲೆಯಲ್ಲಿ ಅಂಗಡಿ ನಿರ್ಮಾಣಕ್ಕೆ ಮುಂದಾಗಿಲ್ಲ.
20ಕ್ಕೂ ಅಧಿಕ ವರ್ತಕರು ಲೈಸೆನ್ಸ್ ಪಡೆದುಕೊಂಡಿದ್ದು, ಈ ಪೈಕಿ ಮೂರ್ನಾಲ್ಕು ವ್ಯಾಪಾರಸ್ಥರು ಮಾತ್ರ ದುಬಲಗುಂಡಿ ಗ್ರಾಮದಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ದುಬಲಗುಂಡಿ ವಲಯ ಬೆಳೆಯುತ್ತಿದ್ದು ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ದುರ್ಯೋಧನ ಹೂಗಾರ