ಶ್ರೀನಗರ: ಕಣಿವೆ ರಾಜ್ಯದಲ್ಲಿ ಯೋಧರ ಬಂದೂಕು ಗುಡುಗಿದರಷ್ಟೇ ಉಗ್ರರ ಎದೆ ನಡುಗುವುದಿಲ್ಲ. ಭದ್ರತಾ ಪಡೆಯ ಶ್ವಾನ ಬೊಗಳಿದರೂ ಪಾತಕಿಗಳ ಜೀವ ಮೇಲೆ ಕೆಳಗಾಗುತ್ತದೆ!
ಹೌದು, ಉಗ್ರರ ದಮನಕ್ಕಾಗಿಯೇ ಮೀಸಲಾಗಿರುವ “44 ರಾಷ್ಟ್ರೀಯ ರೈಫಲ್ಸ್’ ಪಡೆಯಲ್ಲಿ 6 ಶ್ವಾನಗಳು ಕೂಡ ಹೀರೋ! ಸಾಕಷ್ಟು ಬಾರಿ ಉಗ್ರರ ಮೈಚಳಿ ಬಿಡಿಸಿದ್ದಲ್ಲದೆ, ಹಲವು ಅಪಾಯಗಳನ್ನು ತಪ್ಪಿಸಿವೆ.
ಅದರಲ್ಲೂ ರೋಶ್, ತಾಪಿ ಮತ್ತು ಕ್ಲೈಡ್ ಶ್ವಾನಗಳು ದಕ್ಷಿಣ ಕಾಶ್ಮೀರದ ಅತಿಸೂಕ್ಷ್ಮ ಪ್ರದೇಶದ ಗಸ್ತು ಹೊಣೆ ಹೊತ್ತಿವೆ. ಪುಲ್ವಾ ಮಾದ ಲಸ್ಸಿಪುರ, ಇಮಾಮ್ ಸಾಹೇಬ್, ಶೋಪಿಯಾನ್ ಪಟ್ಟಣಗಳನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸುತ್ತಿರೋದು ಇದೇ ಶ್ವಾನಗಳು. ಸುಧಾರಿತ ಸ್ಫೋಟಕಗಳ ಪತ್ತೆ, ಉಗ್ರರ ಶೋಧದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.
ರೋಶ್ ಎಂಬ ಹೀರೋ: “2 ವರ್ಷದ ರಫ್ಲಿಂಗ್ ರೋಶ್ ಶ್ವಾನ ನಮ್ಮ ಪಡೆಯ ಸೆಲೆಬ್ರಿಟಿ’ ಅಂತಾರೆ 44 ರಾಷ್ಟ್ರೀಯ ರೈಫಲ್ಸ್ ಮುಖ್ಯಸ್ಥ ಕ್ಯಾ| ಎ.ಕೆ. ಸಿಂಗ್. “ಕಳೆದ ವರ್ಷ ಎನ್‌ಕೌಂಟರ್ ನಡೆದ ಸ್ಥಳದಿಂದ 1.5 ಕಿ.ಮೀ. ದೂರದಲ್ಲಿ ಅವಿತಿದ್ದ ಹಿಜ್ಬುಲ್ ಮುಜಾ ಹಿದೀನ್ ಉಗ್ರನನ್ನು ರೋಶ್ ಜೀವಂತವಾಗಿ ಹಿಡಿದು ಕೊಟ್ಟಿತ್ತು. ಶೋಪಿಯನ್‌ನ ದ್ರಾಗರ್ ಹಳ್ಳಿಯಲ್ಲಿದ್ದ ಉಗ್ರರ ಅಡಗುತಾಣವನ್ನೂ ಪತ್ತೆಹಚ್ಚಿತ್ತು’ ಎಂದು ಸಿಂಗ್ ಹೇಳಿದ್ದಾರೆ.
ಕಾಡಿನಲ್ಲೂ ನಿಸ್ಸೀಮ: “ಸೇಬು ತೋಟಗಳಲ್ಲಿ, ದಟ್ಟ ಕಾಡಿನಲ್ಲಿ ಅಡಗಿ ಕುಳಿತ ಉಗ್ರರನ್ನು ಶೋಧಿಸುವಲ್ಲಿ ರೋಶ್ ನಿಸ್ಸೀಮ. ನಿಷೇಧಿತ ಹಿಜ್ಬುಲ್ ಸಂಘಟನೆ ಕಮಾಂಡರ್ ಆಬಿದ್ ಮನ್ಸೂರ್ ಮಾಗ್ರೇಯನ್ನೂ ಇದೇ ಶ್ವಾನ ಹಿಡಿದುಕೊಟ್ಟಿತ್ತು’ ಎಂದು ಶ್ಲಾಘಿಸಿದ್ದಾರೆ. ರೋಶ್ ಜತೆಗಿರುವ ಐದು ಶ್ವಾನಗಳೂ ವಿವಿಧ ಕಾರ್ಯಾಚರಣೆಗಳಲ್ಲಿ ದಿಟ್ಟ ಪಾತ್ರ ವಹಿಸಿ, ಸೇನಾ ಪದಕಗಳನ್ನು ಪಡೆದಿವೆ. “44 ರಾಷ್ಟ್ರೀಯ ರೈಫಲ್ಸ್’ ಪಡೆಗೆ ನಿಯೋಜನೆ ಗೊಂಡಿದ್ದ ಮೊದಲ ಶ್ವಾನ “ಮಾನ್ಸಿ’. ಅದರ ತ್ಯಾಗದ ವಿವರಗಳು “ಗೆಜೆಟ್ ಆಫ್ ಇಂಡಿಯಾ’ದಲ್ಲಿ ಉಲ್ಲೇಖವಾಗಿದೆ.
“ವರ್ಚುವಲ್ ಸಿಮ್’ ತಲೆನೋವು: ಕಾಶ್ಮೀರದಲ್ಲಿ ಭದ್ರತಾ ಪಡೆಗೆ ಈಗ ವರ್ಚುವಲ್ ಸಿಮ್‌ಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. 2019ರಲ್ಲಿ ಪುಲ್ವಾಮಾ ದಾಳಿಗೆ ಜೆಇಎಂ ಉಗ್ರ ಸಂಘಟನೆ 40ಕ್ಕೂ ಅಧಿಕ ವರ್ಚುವಲ್ ಸಿಮ್‌ಗಳನ್ನು ಬಳಸಿ ಕೃತ್ಯ ಎಸಗಿದ್ದ ವಿಚಾರ ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇಂಥದ್ದೇ ಸಿಮ್‌ಗಳನ್ನು ಈಗ ಗಡಿಯುದ್ದಕ್ಕೂ ಉಗ್ರರು ಬಳಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ವಿದೇಶಿ ನೆಟ್‌ವರ್ಕ್ ಸಂಸ್ಥೆಗಳು ವರ್ಚುವಲ್ ಸಿಮ್‌ಗಳನ್ನು ಪೂರೈಸುತ್ತವೆ. ಇವು ಮಾಮೂಲಿ ಸಿಮ್‌ಗಳಲ್ಲ. ಕಂಪ್ಯೂಟರ್ ಮೂಲಕ ಒಂದು ದೂರವಾಣಿ ಸಂಖ್ಯೆ ರಚಿಸಿ, ನಿರ್ದಿಷ್ಟ ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡು ಇದನ್ನು ನಿರ್ವಹಿಸಲಾಗುತ್ತದೆ. ಈ ನಂಬರ್ ಮೂಲಕ ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್, ಟೆಲಿಗ್ರಾಂನಂಥ ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು.