Advertisement

ರುದ್ರೇಶ್‌ ಹತ್ಯೆ ಪ್ರಕರಣ: ಎನ್‌ಐಎ ತನಿಖೆ ರದ್ದು

12:50 PM Mar 22, 2017 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣ ಸಂಬಂಧ “ಎನ್‌ಐಎ’ (ರಾಷ್ಟ್ರೀಯ ತನಿಖಾ ದಳ)  ತನಿಖೆಯನ್ನು ಹೈಕೋರ್ಟ್‌ ರದ್ದುಗೊಳಿಸಿದ್ದು, ಪ್ರಕರಣದ ತನಿಖೆಯನ್ನು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರೇ ಮುಂದುವರಿಸಲಿ ಎಂದು ಆದೇಶಿಸಿದೆ.

Advertisement

ಪ್ರಕರಣದ ಆರೋಪಿ ಇರ್ಫಾನ್‌ ಪಾಶಾ, ಸೂಕ್ತ ಸಾಕ್ಷ್ಯಗಳಿಲ್ಲದಿದ್ದರೂ, ಕೇಂದ್ರ ಸರ್ಕಾರ ಸೂಚಿಸುವ ಮೊದಲೇ ಎನ್‌ಐಎ ತನಿಖಾದಳ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದೆ. ಈ ನಿಟ್ಟಿನಲ್ಲಿ ತನಿಖೆ ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯಪೀಠ, ಕೇಂದ್ರ ಸರ್ಕಾರ ತನಿಖೆಗೆ ನಿರ್ದೇಶಿಸುವ ಮೊದಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಎನ್‌ಐಎ ತಂಡ,  ಆರೋಪಿಗಳ ವಿರುದ್ಧ ಎನ್‌ಐಎ 1980 ರ ಆ್ಯಕ್ಟ್ ಅನ್ವಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫ‌ಲವಾಗಿದೆ ಎಂದಿದೆ.

ಜತೆಗೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಎನ್‌ಐಎಗೆ ಬರೆದಿರುವ ಪತ್ರದಲ್ಲಿ, ಆರೋಪಿಗಳ ವಿರುದ್ಧ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ಮಾತ್ರವೇ ಉಲ್ಲೇಖೀಸಿದ್ದಾರೆ. ಅಲ್ಲದೆ ಎನ್‌ಐಎ ಆ್ಯಕ್ಟ್ ಅಡಿಯಲ್ಲಿ ಬರುವ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಪಾಲ್ಗೊಂಡ ಬಗ್ಗೆ ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಒದಗಿಸಿಲ್ಲ.

ಒಂದು ವೇಳೆ ಈ ಪ್ರಕರಣದಲ್ಲಿ ಎನ್‌ಐಎ ತನಿಖೆ ಮಂದುವರಿಸಿದರೆ, ಇದೇ ರೀತಿ ಹಲವು ಪ್ರಕರಣಗಳು ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಜತೆಗೆ ಅರ್ಜಿದಾರನ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟು ಎನ್‌ಐಎ ತನಿಖೆಯನ್ನು ರದ್ದುಗೊಳಿಸಿತು.

Advertisement

ಅಲ್ಲದೆ ಕಾನೂನುಬಾಹಿರ ಚಟುವಟಿಕೆಗಳ 1967ರ ಕಾಯ್ದೆ ಅನ್ವಯ ಕಮರ್ಷಿಯಲ್‌ ಠಾಣೆ ಪೊಲೀಸರೇ ಪ್ರಕರಣದ ತನಿಖೆ ನಡೆಸಲಿ ಎಂದು ಸೂಚಿಸಿತು. ಅಲ್ಲದೆ ಪೊಲೀಸರು ಆರೋಪಿಗಳು ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು 180 ದಿನಗಳ ಕಾಲಾವಕಾಶ ನೀಡಬಾರದು ಎಂದು ಕೋರಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next