ದಾವಣಗೆರೆ: ಪೋಲಿಯೋಮುಕ್ತ ಭಾರತದ ಮಾದರಿಯಲ್ಲೇ ಮೀಸಲ್ಸ್-ರುಬೆಲ್ಲಾ ಕಾಯಿಲೆ ಸಹ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ ಆಶಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ವತಿಯಿಂದ ಮಂಗಳವಾರ ಬಾಪೂಜಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೀಸಲ್ಸ್-ರುಬೆಲ್ಲಾ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪೋಲಿಯೋ ನಿರ್ಮೂಲನೆಗೆ ಕೈಗೊಂಡಂತೆಯೇ ಮೀಸಲ್ -ರುಬೆಲ್ಲಾ ವಿರುದ್ಧ ಕೂಡ ಅಭಿಯಾನ ಆರಂಭಿಸಲಾಗಿದೆ. ಇದು ಜಿಲ್ಲೆಯಾದ್ಯಂತ ನಡೆಯಲಿದೆ ಎಂದರು.ಸರ್ಕಾರ ಮೀಸಲ್ಸ್-ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಪ್ರಾಶಸ್ತ ನೀಡಿದೆ. 9 ತಿಂಗಳಿನಿಂದ 15 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಬೇಕಿದೆ. ಜಿಲ್ಲೆಯಲ್ಲಿನ 4.5 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ. 100 ಗುರಿ ಸಾಧಿಸುವ ಉದ್ದೇಶ ಹೊಂದಲಾಗಿದೆ.
ಲಸಿಕಾ ಅಭಿಯಾನ ಯಶಸ್ವಿಯಾಗಬೇಕಾದಲ್ಲಿ ಶಾಲಾ ವರ್ಗದವರ ಪಾತ್ರ ಅತಿ ಮುಖ್ಯವಾಗಿದೆ. ಈ ಲಸಿಕಾ ಅಭಿಯಾನಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಮೀಸಲ್ಸ್-ರುಬೆಲ್ಲಾ ಲಸಿಕೆ ಆಗಿರುವುದರಿಂದ ಎಲ್ಲರಿಗೂ ಹೆದರಿಕೆ ಸಹಜ. ಆದರೆ, ಭಯ ಪಡುವಂತಹದ್ದು ಏನೂ ಇಲ್ಲ. ಲಸಿಕಾ ಅಭಿಯಾನದ ಕುರಿತು ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಮಾಧ್ಯಮದವರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿರಬೇಕೆಂದರೆ ಈ ಲಸಿಕೆ ಹಾಕಿಸಿಕೊಳ್ಳಬೇಕು. ಸಮುದಾಯದಲ್ಲಿನ ಪ್ರತಿಯೊಬ್ಬರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ. ಎಲ್ಲ ಮಕ್ಕಳು ಯಾವುದೇ ಭಯ ಇಲ್ಲದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್‌ಸಿಹೆಚ್‌ಓ ಡಾ| ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೀಸಲ್ಸ್ ತೀವ್ರವಾಗಿ ಹರಡುವ ಒಂದು ವೈರಸ್ ಕಾಯಿಲೆ. ವಾರ್ಷಿಕವಾಗಿ 49 ಸಾವಿರಕ್ಕೂ ಹೆಚ್ಚು ಮಕ್ಕಳು ಮೀಸಲ್ಸ್‌ನಿಂದ ಅಸು ನೀಗುತ್ತಿದ್ದಾರೆ. ಇಂತಹ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡಲು ಸರ್ಕಾರ ಮೀಸಲ್ಸ್-ರುಬೆಲ್ಲಾ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು. ಮೊದಲಿಗೆ ದೇಶದ ದಕ್ಷಿಣ ಭಾಗಗಳಲ್ಲಿ ಅಭಿಯಾನ ಆರಂಭಿಸಿದ್ದು, ರಾಷ್ಟ್ರಾದ್ಯಂತ ಈ ಅಭಿಯಾನ ನಡೆಯಲಿದೆ.
ಈಗಾಗಲೇ 10 ಮಾರಣಾಂತಿಕ ಕಾಯಿಲೆಗಳಿಗೆ ಸರ್ಕಾರ ಲಸಿಕೆ ನೀಡುತ್ತಿದೆ. ಭಾರತವೀಗ ಪೋಲಿಯೋ ಮುಕ್ತವಾಗಿದೆ. 2020ರ ವೇಳೆಗೆ ದಢಾರಮುಕ್ತ ಮತ್ತು ರುಬೆಲ್ಲಾ ನಿಯಂತ್ರಿತ ರಾಷ್ಟ್ರ ನಿರ್ಮಾಣದ ಗುರಿ ಹೊಂದಲಾಗಿದೆ. ಲಸಿಕೆ ಹಾಕಿಸಿಕೊಂಡ ಮಕ್ಕಳ ಎಡಗೈ ಹೆಬ್ಬೆರಳಿಗೆ ಗುರುತು ಹಾಕಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಬ, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಚ್. ಎಂ. ಪ್ರೇಮಾ, ಆಯುಷ್ ಅಧಿಕಾರಿ ಡಾ| ಯು. ಸಿದ್ದೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕೆ.ಎಚ್. ವಿಜಯ್ ಕುಮಾರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ| ಎಚ್.ಡಿ. ವಿಶ್ವನಾಥ್, ಲಯನ್ಸ್ ಕ್ಲಬ್‌ನ ಡಾ| ಬಿ ಎಸ್ ನಾಗಪ್ರಕಾಶ್, ಚಿಗಟೇರಿ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಡಾ| ಪ್ರಮೀಳಾ, ಡಾ| ಗಂಗಾಧರ್ ಇತರರು ಇದ್ದರು. ಬಾಪೂಜಿ ಶಾಲೆಯ ನಿರ್ದೇಶಕ ಕೆ. ಇಮಾಂ ಸ್ವಾಗತಿಸಿದರು, ಮಹದೇವಪ್ಪ ನಿರೂಪಿಸಿದರು. ಪ್ರಾಂಶುಪಾಲ ಸಿ. ಮಂಜಪ್ಪ ವಂದಿಸಿದರು.