ಬೆಳ್ಳಾರೆ: ರಬ್ಬರ್ ಧಾರಣೆ ಕುಸಿತಗೊಂಡ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಅರಂತೋಡು, ಬೆಳ್ಳಾರೆ, ಸಂಪಾಜೆ ಭಾಗದಲ್ಲಿ ರಬ್ಬರ್ ಬೆಳೆಗಾರರು ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಪರಿಣಾಮ ಸಾವಿರಾರು ಎಕ್ರೆಗಳಲ್ಲಿ ಬೆಳೆಯಲಾಗಿದ್ದ ರೈತರು ರಬ್ಬರ್ ಟ್ಯಾಪಿಂಗ್ ಮಾಡುವುದನ್ನೇ ನಿಲ್ಲಿಸಿದ್ದಾರೆ. ಸುಳ್ಯ ತಾಲೂಕಿನಾದ್ಯಂತ ಅಡಿಕೆ ಮತ್ತು ರಬ್ಬರ್ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದೀಗ ಅಡಿಕೆ ಕೃಷಿಗೂ ಹಳದಿ ರೋಗ, ರಬ್ಬರ್ ವ್ಯಾಪಕವಾಗಿ ಹರಡಿಕೊಂಡಿರುವ ಪರಿಣಾಮ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಮದು ನೀತಿಯನ್ನು ಸಡಿಲಿಸಿರುವುದೇ ಇದಕ್ಕೆ ಕಾರಣ ಎಂದು ರಬ್ಬರ್ ಕೃಷಿಕರು ಅಭಿಪ್ರಾಯ ಪಡುತ್ತಾರೆ.
ಅಸಲು ಅಧಿಕ
ಸ್ಥಳೀಯವಾಗಿ ಉತ್ಪಾದನಾ ವೆಚ್ಚ ಒಂದು ಕೆಜಿಗೆ 120 ಆಗುತ್ತಿದ್ದು ರಬ್ಬರ್ ಮರಕ್ಕೆ ಹಾಕುವ ಗಂ, ಪ್ಲಾಸ್ಟಿಕ್, ಹಾಗೂ ಇತರ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಸಣ್ಣ ರಬ್ಬರ್ ಬೆಳೆಗಾರರು ತಾವೇ ಟ್ಯಾಪಿಂಗ್ ಮಾಡುತ್ತಿದ್ದು, ಕೂಲಿಕಾರ್ಮಿಕರನ್ನು ಆಶ್ರಯಿಸಿದ ಕೆಲವು ರಬ್ಬರ್ ಬೆಳೆಗಾರರು ಟ್ಯಾಪಿಂಗ್ ಈಗಾಗಲೇ ನಿಲ್ಲಿಸಿದ್ದಾರೆ. ಮುಂದಿನ ವರ್ಷವ ಮರದಲ್ಲಿ ಹಾಲು ಕಡಿಮೆಯಾದರೆ ಎಂಬ ಭಯದಿಂದ ಕೆಲವರು ನಷ್ಟದಲ್ಲಿದ್ದರೂ ರಬ್ಬರ್ ಹಾಲು ತೆಗೆಯುತ್ತಿದ್ದಾರೆ. ರಬ್ಬರ್ ಬೆಳೆಗಾರರ ನಿರುತ್ಸಾಹ ಹಾಲು ತೆಗೆಯುವ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಜೀವನ ನಿರ್ವಾಹಣೆಗಾಗಿ ಪರ್ಯಾಯ ಕೆಲಸದ ಮೊರೆ ಹೋಗಿದ್ದಾರೆ.
ರಾಜ್ಯದ 60 ಸಾವಿರ ಹೆಕ್ಟೆರ್ ರಬ್ಬರ್ ತೋಟದ ಪೈಕಿ ಶೇ. 50 ರಷ್ಟು ದ.ಕ. ಜಿಲ್ಲೆಯಲ್ಲಿದೆ. ಇದೀಗ ರಬ್ಬರ್ ಟ್ಯಾಪಿಂಗ್ ನಿಲ್ಲಿಸಿರುವುದರಿಂದ ದೇಶದಲ್ಲಿ 2 ಲಕ್ಷ ಮೆಟ್ರಿಕ್ ಟನ್ ಮತ್ತು ರಾಜ್ಯದಲ್ಲಿ 10 ಸಾವಿರ ಮೆಟ್ರಿಕ್ ಉತ್ಪಾದನೆ ಕುಸಿದಿದೆ ಅಂದಾಜಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿ 35 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿತ್ತು. ಈ ಹಿಂದೆ ಅಡಿಕೆ ಜಾಗದಲ್ಲಿ ರಬ್ಬರ್ ಬೆಳೆಯನ್ನು ಪರಿಚಯಿಸಲಾಗಿತ್ತು.ಆದರೆ ಈಗ ರಬ್ಬರ್ ಲಾಭ ತರದ ಹಿನ್ನೆಲೆಯಲ್ಲಿ ಸುಳ್ಯ ಭಾಗದವರು ತಾಳೆ ಬೆಳೆಯತ್ತ ಮುಖ ಮಾಡುತ್ತಿದ್ದಾರೆ.
ಭವಿಷ್ಯವಿಲ್ಲ
ಈಗ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಕೆ.ಜಿಗೆ ರೂ. 121 ಇದೆ. ಈ ಮಾರುಕಟ್ಟೆ ಏನೂ ಸಾಲದೂ. ಕಾರ್ಮಿಕರರನ್ನು ಇಟ್ಟುಕೊಂಡು ರಬ್ಬರ್ ಟ್ಯಾಪಿಂಗೆ ಹಾಗೂ ಇತರೆ ಕೆಲಸ ಮಾಡಿಸಿದರೆ ಉಳಿತಾಯ ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಕನಿಷ್ಠ ರಬ್ಬರ್‌ಗೆ ಕೇಜಿಯೊಂದಕ್ಕೆ ರೂ. 170 ಮಾರುಕಟ್ಟೆ ಧಾರಣೆ ಬರಬೇಕು. ಇಲ್ಲದಿದ್ದರೆ ರಬ್ಬರ್ ಕೃಷಿಕರಿಗೆ ಭವಿಷ್ಯ ಇಲ್ಲ.
– ಮಾಧವ ಗೌಡ ಕಾಮಧೇನು, ರಬ್ಬರ್ ಕೃಷಿಕರು ಬೆಳ್ಳಾರೆ