Advertisement
ನಾಗಪಟ್ಟಣದ ಮೇದಿನಡ್ಕ ಅರಣ್ಯ ನಿಗಮ ವ್ಯಾಪ್ತಿಯ ಸೆಂಟ್ರಿಫ್ಯೂಜ್ ಲೇಟೆಕ್ಸ್ ಮತ್ತು ಕ್ರೀಪ್ ರಬ್ಬರ್ ಫ್ಯಾಕ್ಟರಿ ಕಾರ್ಮಿಕರ ವಸತಿಗೃಹದಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು ಪಯಸ್ವಿನಿ ಒಡಲು ಸೇರಿ ರೋಗ ಭೀತಿ ಮೂಡಿಸಿದೆ. ಇದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಆತಂಕ ಕಾಡಿದೆ.
ಆಲೆಟ್ಟಿ ಗ್ರಾ.ಪಂ. ಮತ್ತು ಸುಳ್ಯ ನಗರ ಪಂಚಾಯತ್ ಸರಹದ್ದಿನಲ್ಲಿರುವ ನಾಗಪಟ್ಟಣ ಪ್ರದೇಶ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಅರಣ್ಯ ನಿಗಮಕ್ಕೆ ಸೇರಿರುವ ಫ್ಯಾಕ್ಟರಿಯಿದೆ. ಇಲ್ಲಿ ಕೆಲಸ ನಿರ್ವಹಿಸುವ 70ಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ನಿಗಮದ ಸುಪರ್ದಿಗೆ ಒಳಪಟ್ಟಿರುವ ವಸತಿಗೃಹದಲ್ಲಿ ವಾಸಿಸುತ್ತಿವೆ. ಸುಳ್ಯ-ಆಲೆಟ್ಟಿ-ಬಂದ್ಯಡ್ಕ ಅಂತಾರಾಜ್ಯ ರಸ್ತೆಯ ನಾಗಪಟ್ಟಣ ಸದಾಶಿವ ದೇವಾಲಯದ ಇನ್ನೊಂದು ಪಾರ್ಶ್ವದಲ್ಲಿ ಈ ವಸತಿಗೃಹಗಳಿವೆ. ರಬ್ಬರ್‌ಫ್ಯಾಕ್ಟರಿಗೆ ತಾಗಿಕೊಂಡೇ ಈ ಮನೆಗಳಿವೆ.
ಕಾಲನಿ ತರಹದಲ್ಲಿ ಈ ಮನೆಗಳಿದ್ದು, ದಿನಂಪ್ರತಿ ವಸತಿಗೃಹಗಳಿಂದ ಹರಿದು ಬರುವ ತ್ಯಾಜ್ಯ ನೀರು ಮುಖ್ಯ ರಸ್ತೆಯ ಚರಂಡಿ ಸೇರುತ್ತಿದೆ. ಈ ಚರಂಡಿ ಪಯಸ್ವಿನಿ ನದಿಗೆ ಸಂಪರ್ಕ ಹೊಂದಿದ್ದು, ಕೆಲ ಮೀಟರ್ ದೂರದಲ್ಲಿರುವ ನಾಗಪಟ್ಟಣ ಸೇತುವೆ ಬಳಿ ಪಯಸ್ವಿನಿ ನದಿಗೆ ಈ ತ್ಯಾಜ್ಯ ಸೇರುತ್ತದೆ. ಅಂತಾರಾಜ್ಯ ಸಂಪರ್ಕ ರಸ್ತೆಯ ಇಕ್ಕೆಲೆಯ ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿದೆ. ಹೀಗಾಗಿ ಮನೆ ಮಂದಿ, ದೇವಾಲಯಕ್ಕೆ ಬರುವ ಭಕ್ತರು ಮಾತ್ರವಲ್ಲದೆ, ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇದೆ. ತ್ಯಾಜ್ಯ ನೀರು ಚರಂಡಿಯಲ್ಲಿ ಸಾಗಿ ನದಿ ಸೇರುತ್ತಿರುವುದು ಕಾಣುತ್ತಿದ್ದರೂ, ಇದರ ವಿರುದ್ಧ ಇನ್ನೂ ಕಠಿನ ಕ್ರಮ ಕೈಗೊಂಡಿಲ್ಲ.
Related Articles
ಈ ತ್ಯಾಜ್ಯ ಸೇರುವ ನದಿ ಪ್ರದೇಶದಿಂದ ಕೆಲ ದೂರದಲ್ಲಿ ನಗರಕ್ಕೆ ನೀರೊದಗಿಸುವ ಮರಳು ಕಟ್ಟವಿದೆ. ಅಲ್ಲಿಂದ ಹೆಚ್ಚುವರಿಯಾಗಿ ಕೆಳಭಾಗಕ್ಕೆ ಹರಿದು ಬರುವ ನೀರಿಗೆ ತ್ಯಾಜ್ಯ ನೀರು ಸೇರುತ್ತಿದೆ. ಡಿಸೆಂಬರ್‌ನಲ್ಲಿ ನದಿಯಲ್ಲಿ ನೀರಿನ ಹರಿವು ಸಾಕಷ್ಟು ಇರುತ್ತದೆ. ಹಾಗಾಗಿ ನೀರಿನೊಟ್ಟಿಗೆ ಮಿಶ್ರಣಗೊಳ್ಳುವ ತ್ಯಾಜ್ಯ ನದಿ ನೀರು ಹರಿದು ಹೋಗುವ ಎಲ್ಲ ಪ್ರದೇಶಗಳಿಗೆ ಸೇರುತ್ತದೆ. ಹೀಗಾಗಿ ಶುದ್ಧೀಕರಿಸದೆ ನದಿ ನೀರು ನೇರ ಬಳಕೆ ಮಾಡುತ್ತಿರುವ ಜನರ ಆರೋಗ್ಯದ ಮೇಲೆ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ.
Advertisement
ಸೂಚನೆ ನೀಡಿದ್ದರೂ ಸ್ಪಂದನೆ ಇಲ್ಲಹಲವು ಸಮಯಗಳಿಂದ ತ್ಯಾಜ್ಯ ನೀರು ನದಿಗೆ ಸೇರುತ್ತಿರುವುದು ಗ್ರಾ.ಪಂ. ಗಮನಕ್ಕೆ ಬಂದಿದೆ. ಈ ಬಗ್ಗೆ ರಬ್ಬರ್ ನಿಗಮಕ್ಕೆ ತಿಳಿವಳಿಕೆ ಪತ್ರ, ನೋಟಿಸ್ ನೀಡಿದ್ದೇವೆ. ಅಲ್ಲಿನ ಅಧಿಕಾರಿಗಳನ್ನು ಸಭೆಗೆ ಖುದ್ದಾಗಿ ಭಾಗವಹಿಸುವಂತೆ ಮನವಿ ಮಾಡಿದ್ದರೂ ಸಮಯಾವಕಾಶ ಕೊರತೆ ಕಾರಣದಿಂದ ಅವರು ಪಾಲ್ಗೊಂಡಿಲ್ಲ. ತಹಶೀಲ್ದಾರ್ ನೇತೃತ್ವದಲ್ಲಿ ರಬ್ಬರ್ ನಿಗಮದವರನ್ನು ಕರೆದು ಸಭೆ ನಡೆಸಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.
– ಎ.ಬಿ. ಅಜಿತ್ ಕುಮಾರ್ ಪಿಡಿಒ, ಆಲೆಟ್ಟಿ ಗ್ರಾ.ಪಂ. – ಕಿರಣ್ ಪ್ರಸಾದ್ ಕುಂಡಡ್ಕ